ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಉದ್ಯಮಿ, ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ,1 ಲಕ್ಷ ದಂಡ ವಿಧಿಸಿ ಆದೇಶ

 


ಉಡುಪಿ: ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಉದ್ಯಮಿ ,ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿಕ್ರಿ ಹೋಲ್ಡರ್ ಸಂತೋಷ್ ಪೈ ಅವರು ಅಮೃತ್ ಶೆಣೈ ವಿರುದ್ಧ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮುಂದೆ ಸಿ.ಸಿ. ನಂ. 76/2023 ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ವೈಗರ್ ಅಪಾರ್ಟ್‌ಮೆಂಟ್‌ನ ಮನೆ ನಂ. 304 ಅನ್ನು ಅರ್ಜಿದಾರರ ಹೆಸರಿಗೆ ನೋಂದಣಿ ಮಾಡಿಕೊಡಬೇಕು, ಇಲ್ಲವಾದಲ್ಲಿ ₹27.20 ಲಕ್ಷ ಮೊತ್ತವನ್ನು ವಾರ್ಷಿಕ ಶೇ.9 ಬಡ್ಡಿದರದೊಂದಿಗೆ ಪಾವತಿಸಬೇಕು ಎಂದು ಆದೇಶಿಸಿತ್ತು.

ಆದರೆ, ಆಯೋಗದ ಆದೇಶವನ್ನು ಅಮೃತ್ ಶೆಣೈ ಪಾಲಿಸದ ಕಾರಣ ಸಂತೋಷ್ ಪೈ ಅವರು Execution Case No. 31/2024 ದಾಖಲಿಸಿದ್ದರು. ಪ್ರಕರಣದ ವಿಚಾರಣೆಯಲ್ಲಿ ಆಯೋಗದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಸೆಕ್ಷನ್ 72ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದ ಆಯೋಗ, ಜೂನ್ 24, 2026ರಂದು ಅಮೃತ್ ಶೆಣೈ ಅವರಿಗೆ 3 ವರ್ಷಗಳ ಸಾದಾ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿತು.

ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ. ಅಲ್ಲದೆ ಆರೋಪಿಯನ್ನು ಆಯೋಗದ ಮುಂದೆ ಹಾಜರುಪಡಿಸುವಂತೆ ಬಂಧನ ವಾರಂಟ್ ಜಾರಿಗೊಳಿಸಲಾಗಿತ್ತು.

ಅದರಂತೆ ಜೂನ್ 25, 2026ರಂದು ಅಮೃತ್ ಶೆಣೈ ಅವರನ್ನು ಆಯೋಗದ ಮುಂದೆ ಹಾಜರುಪಡಿಸಲಾಗಿದ್ದು, ಆಯೋಗವು ನ್ಯಾಯಾಂಗ ಬಂಧನ ವಿಧಿಸಿದೆ. ಬಳಿಕ ಅವರನ್ನು ಹಿರಿಯಡ್ಕ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.