![]() |
| ಚಿತ್ರಕೃಪೆ- ANI |
ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗಿದ್ದು, ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಈ ಅದ್ಧೂರಿ ಕಾರ್ಯಕ್ರಮ ನಡೆಯಿತು. 1967ರ ನಂತರ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಹೊರತಾದ ಪಕ್ಷವೊಂದರ ನಾಯಕ ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿಯುತ್ತಿರುವುದು ಇದೇ ಮೊದಲು.
ಸಂಖ್ಯಾಬಲ ಮತ್ತು ಬಹುಮತ
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚಿಸಲು ಅಗತ್ಯವಿರುವ 118ರ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ಮಿತ್ರಪಕ್ಷಗಳ ಬೆಂಬಲ ಪಡೆದಿದೆ. ನಂತರ ಕಾಂಗ್ರೆಸ್ (5 ಶಾಸಕರು), ಸಿಪಿಐ (2), ಸಿಪಿಐ(ಎಂ) (2), ವಿಸಿಕೆ (2) ಮತ್ತು ಐಯುಎಂಎಲ್ (2) ಪಕ್ಷಗಳು ವಿಜಯ್ ಅವರಿಗೆ ಬೆಂಬಲ ಸೂಚಿಸಿವೆ.ಸಮಾರಂಭದಲ್ಲಿ ಪಾಲ್ಗೊಳ್ಳಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈಗಾಗಲೇ ಆಗಮಿಸಿದ್ದಾರೆ. ನಟಿ ತ್ರಿಶಾ ಕೃಷ್ಣನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸುತ್ತಿದ್ದು, ಇದು ತಮಿಳುನಾಡಿನ ಪಾಲಿಗೆ ದೊಡ್ಡ ದಿನ ಎಂದು ತ್ರಿಶಾ ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ತಂದೆ ಹಾಗೂ ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರು, ತಮ್ಮ ಮಗ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ತಾಯಂದಿರ ದಿನದಂದೇ (Mother's Day) ಮಗ ಮುಖ್ಯಮಂತ್ರಿಯಾಗುತ್ತಿರುವುದು ತಮಗೆ ಅಪಾರ ಸಂತಸ ತಂದಿದೆ ಎಂದು ವಿಜಯ್ ಅವರ ತಾಯಿ ಶೋಭಾ ಅವರು ತಿಳಿಸಿದ್ದಾರೆ.
