ಕುಂದಾಪುರ: ​ಹೊಸೂರು ಸರ್ಕಾರಿ ಜಮೀನು ಒತ್ತುವರಿ ಹಗರಣ – ಭ್ರಷ್ಟ ಅಧಿಕಾರಿಗಳ ವಿರುದ್ಧ ಕುಂದಾಪುರ ಎಸಿ ಕಚೇರಿ ಮುಂದೆ ‘ಒಲೆ ಹೂಡಿ ಅನ್ನ ಬೇಯಿಸುವ’ ವಿಭಿನ್ನ ಪ್ರತಿಭಟನೆ!

 


ಕುಂದಾಪುರ: ತಾಲೂಕಿನ ವಂಡ್ಸೆ ಹೋಬಳಿ ಹೊಸೂರು ಗ್ರಾಮದ ಸರ್ವೆ ನಂಬರ್ 141ರ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಲು ಕಂದಾಯ ಇಲಾಖೆಯ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, ದಲಿತ ಪರ ಹೋರಾಟಗಾರ್ತಿ ನಾಗರತ್ನ ನೇತೃತ್ವದಲ್ಲಿ ಕುಂದಾಪುರ ಉಪ ವಿಭಾಗ ಸಹಾಯಕ ಕಮಿಷನರ್ (AC) ಕಚೇರಿ ಮುಂದೆ ಇಂದಿನಿಂದ  “ಒಲೆ ಹೂಡಿ – ಅನ್ನ ಬೇಯಿಸುವ” ವಿಭಿನ್ನ ಹಾಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.



​ರಾಜ್ಯ ಕಂದಾಯ ಸಚಿವರಿಗೆ ಉಪ ವಿಭಾಗಾಧಿಕಾರಿಗಳ ಮೂಲಕ ಹಕ್ಕೊತ್ತಾಯ ಪತ್ರ ಸಲ್ಲಿಸಿರುವ ಪ್ರತಿಭಟನಾಕಾರರು, ಸರ್ಕಾರಿ ಜಮೀನು ಒತ್ತುವರಿಗೆ ನೇರ ಸಹಕಾರ ನೀಡಿದ ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ (FDA) ರಾಘವೇಂದ್ರ ಮತ್ತು ಕರ್ತವ್ಯ ಲೋಪ ಎಸಗಿದ ಕುಂದಾಪುರ ತಹಶೀಲ್ದಾರ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಅಕ್ರಮ ಕಟ್ಟಡಗಳನ್ನು ತಕ್ಷಣ ನೆಲಸಮಗೊಳಿಸುವಂತೆ ಆಗ್ರಹಿಸಿದ್ದಾರೆ.