ಕೊಡವೂರು: ಲೋಕಕಲ್ಯಾಣಾರ್ಥ ನಡೆಯುತ್ತಿರುವ ರುದ್ರಯಾಗದಿಂದ ದೇಶ, ರಾಜ್ಯ ಸುಭಿಕ್ಷೆ ಹೊಂದಲಿ: ಸಚಿವ ರಾಮಲಿಂಗಾರೆಡ್ಡಿ

 




ಮಲ್ಪೆ: ಮಕ್ಕಳಿಗೆ ಎಲ್ಲ ರೀತಿಯ ಜ್ಞಾನವನ್ನು ತಾಯಿಯೇ ನೀಡಬೇಕು, ಆಗ ಮಾತ್ರ ಮಕ್ಕಳು ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ. ತಾಯಿ ಮಕ್ಕಳಿಗೆ ಶಿಸ್ತು, ಸಂಯಮ, ಹಿರಿಯರಿಗೆ ಗೌರವ, ತಾಳ್ಮೆಯ ಗುಣಗಳನ್ನು ತಾಯಿ ಕಲಿಸಿ ಬೆಳೆಸಬೇಕು. ಮೊದಲು ನಾವು ನಮ್ಮ ಸಂಸ್ಕೃತಿಯನ್ನು ಕಲಿತರೆ ನಮ್ಮ ಮಕ್ಕಳು ಕಲಿಯುತ್ತಾರೆ ಎಂದು ಆನಂದ ಸಿದ್ಧಿ ಪೀಠಂನ ಮತ್ತು ಶ್ರೀ ಲಕ್ಷ್ಮೇ ಭೂ ವರಾಹ ಸಾಲಿಗ್ರಾಮ ಕ್ಷೇತ್ರದ ಸಂಸ್ಥಾಪಕ ಡಾ| ಮಹರ್ಷಿ ಆನಂದ ಗುರೂಜಿ ಹೇಳಿದರು.



ಅವರು ಶುಕ್ರವಾರ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್‌ ಕಾಂಚನ್‌ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾ ರುದ್ರಯಾಗದ ಧಾರ್ಮಿಕ ಸಭೆಯಲ್ಲಿ ಆಶೀರ್ಚನ ನೀಡಿದರು.

ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಭಾಗದಲ್ಲಿ ಸುಮಾರು 75 ವರ್ಷಗಳ ಹಿಂದೆ ರುದ್ರಯಾಗ ನಡೆದಿದೆ ಎನ್ನಲಾಗಿದೆ. ಇದೀಗ ಪ್ರಸಾದ್‌ರಾಜ್‌ ಕಾಂಚನ್‌ ಅವರಿಗೆ ಈ ಯೋಗ ದೊರೆತಿದೆ. ಲೋಕಕಲ್ಯಾಣಾರ್ಥವಾಗಿ ನಡೆದ ಈ ಯಾಗದಿಂದ ದೇಶ, ರಾಜ್ಯಕ್ಕೆ ಬಂದ ಯಾವುದೇ ಸಂಕಷ್ಟಗಳು ದೂರವಾಗಿ, ಈ ನಾಡು ಸುಭಿಕ್ಷೆ ಹೊಂದಲಿ ಎಂದರು.  

ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌ ಅವರು ನಾನು ತೀರ್ಥಯಾತ್ರೆಗೆ ತೆರಳಿದಾಗ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ದೇವರಿಂದಲೇ ಯಾಗ ನೆರವೇರಿಸಲು ಪ್ರೇರಣೆಯಾಯಿತು. ಸಾಮನ್ಯ ಜನರಿಗೆ ಯಾಗವನ್ನು ನೆರವೇರಿಸಲು ಕಷ್ಟಸಾದ್ಯ, ಜನ ಸಾಮಾನ್ಯರೂ ಯಾಗದಲ್ಲಿ ಭಾಗವಹಿಸಿ ಕಣ್ತುಂಬಿಕೊಳ್ಳುವಂತೆ ಮಾಡಬೇಕೆನ್ನುವ ಮಹದಾಸೆ ನನ್ನದಾಗಿತ್ತು. ಇದೀಗ ಎಲ್ಲ ಕೆಲಸಗಳು ದೇವರ ದಯೆಯಿಂದ ಪವಾಡ ಸದೃಶವಾಗಿ ಆಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಚಿವ ರಾಮಲಿಂಗ ರೆಡ್ಡಿ ಮತ್ತು ಮಹರ್ಷಿ ಆನಂದ ಗುರೂಜೀ ಅವರನ್ನು ಸಮ್ಮಾನಿಸಲಾಯಿತು.