ತಿರುವನಂತಪುರಂ/ದೆಹಲಿ, ಮೇ 14: ಸಾಕಷ್ಟು ಅಳೆದು ತೂಗಿ, ನಾನಾ ಲೆಕ್ಕಾಚಾರಗಳ ಬಳಿಕ ಕೊನೆಗೂ ಕೇರಳದ ನೂತನ ಸಿಎಂ ಆಗಿ ವಿ.ಡಿ.ಸತೀಶನ್ ಅವರ ಹೆಸರನ್ನು ಎಐಸಿಸಿ ಘೋಷಿಸಿದೆ. ಕೇರಳ ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್, ವಿ.ಡಿ ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಹೆಸರುಗಳು ಪ್ರಮುಖವಾಗಿ ಸಿಎಂ ರೇಸ್ನಲ್ಲಿದ್ದವು. ಆದರೆ ಈ ಪೈಕಿ ವಿ.ಡಿ.ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಪಕ್ಷದ ವರಿಷ್ಠರು ಪ್ರಕಟಿಸಿದ್ದಾರೆ.ಏಪ್ರಿಲ್ 9ರಂದು ಕೇರಳ ವಿಧಾನಸಭಾ ಚುನಾವಣೆ ನಡೆದಿದ್ದು, ಇದರ ಫಲಿತಾಂಶ ಮೇ 4ರಂದು ಪ್ರಕಟಗೊಂಡಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ 140 ವಿಧಾನಸಭಾ ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಡಳಿತಾರೂಢ ಎಲ್ಡಿಎಫ್ ಕೇವಲ 35 ಸ್ಥಾನಗಳನ್ನು ಪಡೆಯುವ ಮೂಲಕ ಹೀನಾಯ ಸೋಲುಂಡಿತ್ತು. ಹೀಗಿದ್ದರೂ ನೂತನ ಸಿಎಂ ಆಯ್ಕೆಗೆ ಬರೋಬ್ಬರಿ 10 ದಿನಗಳನ್ನು ಕಾಂಗ್ರೆಸ್ ನಾಯಕರು ತೆಗೆದುಕೊಂಡಿದ್ದಾರೆ.ಕೇರಳ ರಾಜ್ಯದ ನೂತನ ಸಿಎಂ ಆಗಿ ವಿ.ಡಿ.ಸತೀಶನ್ ಆಯ್ಕೆ ಬೆನ್ನಲ್ಲೇ ತಿರುವನಂತಪುರಂನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆದಿದೆ.
