ಕುಂದಾಪುರ : ತಂದೆ ಬಸ್ ಕಂಡಕ್ಟರ್ : ಮಗ ರಾಜ್ಯಕ್ಕೆ ಟಾಪರ್ !

ಪ್ರೀತಂ ಪೂಜಾರಿ

ಕುಂದಾಪುರ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625ಕ್ಕೆ 625  ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಗಳಲ್ಲಿ ಒಬ್ಬರಾಗಿದ್ದಾರೆ.

ಪ್ರೀತಮ್‌ ಪೂಜಾರಿ ಸೇರಿ ಒಟ್ಟು ಏಳು ಮಂದಿ ಗರಿಷ್ಠ 625 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.

ಪ್ರೀತಮ್‌ ಬಿದ್ಕಲ್ಕಟ್ಟೆ ನಿವಾಸಿ ಗಣಪತಿ ಪೂಜಾರಿ-ನಾಗರತ್ನಾ ದಂಪತಿಯ ಇಬ್ಬರು ಮಕ್ಕಳ ಪೈಕಿ ಹಿರಿಯ ಪುತ್ರ. ತಂದೆ ಗಣಪತಿಯವರು ಶ್ರೀ ಲಕ್ಷ್ಮೀ ಎಕ್ಸ್ ಪ್ರೆಸ್ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್. ತಾಯಿ ನಾಗರತ್ನಾ ಗೃಹಿಣಿ. ಎಲ್.ಕೆ.ಜಿ.ಯಿಂದಲೂ ಈತ ಮದರ್ ಥೆರೆಸಾ ಸಂಸ್ಥೆಯಲ್ಲಿ ಕಲಿತಿದ್ದ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾಧಕ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ, ಅಂದಿನ ಪಾಠವನ್ನು ಅಂದೇ ಕಣ್ಣುಹಾಯಿಸುತ್ತಿದ್ದೆ. ಪಠ್ಯವನ್ನು ಓದಿ ಮುಗಿಸಲು ತಿಂಗಳ ಗುರಿಯನ್ನು ಇಟ್ಟುಕೊಂಡಿದ್ದೆ. ಪೋಷಕರು ಹಾಗೂ ವಿದ್ಯಾಸಂಸ್ಥೆಯವರ ಪ್ರೋತ್ಸಾಹ, ಮಾರ್ಗದರ್ಶನ ಸಾಧನೆಗೆ ಪ್ರೇರಣೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿಎಸ್ ಓದಿ ಜೆಇಇ ಪರೀಕ್ಷೆ ಬರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.