ಶಾಖಾಘಾತ (ಹೀಟ್ ಸ್ಟ್ರೋಕ್‌ ) ತಡೆಯಲು ವಿಪತ್ತು ನಿರ್ವಹಣಾ ಪ್ರಾಧಿಕಾರ ಜನತೆಗೆ ನೀಡಿರುವ ಸಲಹೆ-ಸೂಚನೆಗಳು

ಸಾಂದರ್ಭಿಕ ಚಿತ್ರ

ಉಡುಪಿ: ಪ್ರಸ್ತುತ ಕರಾವಳಿ ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ ಏರುತ್ತಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ತಾಪಮಾನ 33ರಿಂದ 34 ಡಿಗ್ರಿ ತಲುಪುತ್ತಿದೆ. ಆದರೆ ಗಾಳಿಯಲ್ಲಿರುವ ಅಧಿಕ ತೇವಾಂಶದಿಂದಾಗಿ ಉಷ್ಣತೆಯ ನಿಜವಾದ ಅನುಭವ 38 ಡಿಗ್ರಿಯಷ್ಟಿರುತ್ತದೆ ಎಂದು ಹವಾಮಾನ ಮಾಪಕಗಳು ಸೂಚಿಸುತ್ತಿವೆ.

ಈಗಾಗಲೇ ಹವಾಮಾನ ಇಲಾಖೆ ಈ ಬಾರಿಯ ಬೇಸಿಗೆಯಲ್ಲಿ (ಮಾರ್ಚ್‌ನಿಂದ ಮೇ ಕೊನೆಯವರಿಗೆ ಅಥವಾ ಮಳೆಗಾಲ ಪ್ರಾರಂಭ ಗೊಳ್ಳುವ ಜೂನ್ ಮೊದಲ ವಾರದವರೆಗೆ) ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಸಾಧ್ಯತೆ ಇದ್ದು, ಕರಾವಳಿಯಲ್ಲೂ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಸೂಚನೆ ನೀಡಿದೆ.

ಹೀಗಾಗಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ವಿಶೇಷ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಬಿರು ಬಿಸಿಲಿನಿಂದ ಉಂಟಾಗುವ ಬಳಲಿಕೆ, ನಿರ್ಜಲೀಕರಣ ಹಾಗೂ ಶಾಖಾ ಘಾತ (ಹೀಟ್ ಸ್ಟ್ರೋಕ್‌ಗಳನ್ನು) ತಡೆಯಲು ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನತೆಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದೆ.

ಅತೀ ಹೆಚ್ಚಿನ ತಾಪಮಾನದಿಂದಾಗುವ ಅನಾರೋಗ್ಯವನ್ನು ತಡೆಗಟ್ಟಲು ಸಾರ್ವಜನಿಕರು ಸಾಧ್ಯವಾದಷ್ಟು ಗರಿಷ್ಠ ತಾಪಮಾನದ ಅವಧಿಯಾದ ಅಪರಾಹ್ನ 12ರಿಂದ 3:00ಗಂಟೆಯವರೆಗೆ ಬಿಸಿಲಿಗೆ ಹೋಗುವುದನ್ನು ಕಡಿಮೆ ಮಾಡ ಬೇಕು. ಬಾಯಾರಿಕೆಯ ಅನುಭವವಾಗದಿದ್ದರೂ ಸಹ ಸಾಕಷ್ಟು ನೀರು ಕುಡಿಯುತ್ತಿರಬೇಕು. ಸಾಧ್ಯವಾದಷ್ಟು ಹಗುರವಾದ, ತಿಳಿಬಣ್ಣದ, ಸಡಿಲವಾದ ಹತ್ತಿಬಟ್ಟೆಗಳನ್ನು ಧರಿಸಬೇಕು.ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಛತ್ರಿ/ಟೋಪಿ, ಬೂಟು ಅಥವಾ ಚಪ್ಪಲಿಗಳನ್ನು ಬಳಸಬೇಕು.ವಾತಾವರಣದ ಉಷ್ಣತೆ ಹೆಚ್ಚಿರುವಾಗ ಅಂದರೆ 11:00ಗಂಟೆಯಿಂದ 3:00ರವರೆಗೆ ಶ್ರಮದಾಯಕ ಚಟುವಟಿಕೆಗಳನ್ನು ಆದಷ್ಟು ತಪ್ಪಿಸಬೇಕು. ಇದೇ ಅವಧಿಯಲ್ಲಿ ಹೊರಾಂಗಣಗಳಲ್ಲಿ ನಡೆಯುವ ಸಭಾ, ಸಮಾರಂಭಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆಯನ್ನು ನೀಡಲು ಅಗತ್ಯ ಶಾಮಿಯಾನ/ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯಾಡುವ ವ್ಯವಸ್ಥೆ ಹಾಗೂ ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ಪ್ರಯಾಣಿಸುವಾಗ ನೀರನ್ನು ಜೊತೆಯಲ್ಲಿ ಕೊಂಡೊಯ್ಯಬೇಕು.

ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಸೇವಿಸಬಾರದು. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಸಾಧ್ಯವಿದ್ದಷ್ಟು ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓಆರ್‌ಎಸ್‌ನ್ನು ಬಳಸ ಬೇಕು. ಋತುಮಾನದಲ್ಲಿ ಲಭ್ಯವಿರುವ ಹಾಗೂ ಅಧಿಕ ನೀರಿನ ಅಂಶವನ್ನು ಹೊಂದಿರುವ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್ ಹಣ್ಣುಗಳನ್ನು, ತರಕಾರಿ, ಸೊಪ್ಪು, ಎಳನೀರು ಗಳನ್ನು ಹೆಚ್ಚಾಗಿ ಸೇವಿಸಬೇಕು. ಸಾಕುಪ್ರಾಣಿಗಳನ್ನು ಸಹ ನೆರಳಿನಲ್ಲಿ ಇರಿಸಿ, ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸುತ್ತಿರಬೇಕು.

ಮನೆಯನ್ನು ತಂಪಾಗಿರಿಸಲು ಪರದೆ, ಶಟರ್ ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು. ಹೊರಗೆ ತೆರಳುವಾಗ ನೀರಿನ ಬಾಟಲ್, ಛತ್ರಿ, ಟೋಪಿ ಅಥವಾ ಕ್ಯಾಪ್, ಹೆಡ್‌ಕವ‌ರ್, ಹ್ಯಾಂಡ್‌ಟವೆಲ್, ಹ್ಯಾಂಡ್ ಫ್ಯಾನ್, ಎಲೆಕ್ಟೋಲೈಟ್, ಗ್ಲೋಕೋಸ್, ಓಆರ್‌ಎಸ್‌ನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು ತಡೆಗಟ್ಟುವ ಕಿಟ್ ಅನ್ನು ಒಯ್ಯುವುದು ಉತ್ತಮ. ಅಲ್ಲದೇ ಆರೋಗ್ಯ ಇಲಾಖೆ ಆಗಾಗ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು.