ಕುಖ್ಯಾತ “ಗರುಡ ಗ್ಯಾಂಗ್‌”ನ ರೌಡಿ ಮಹಮ್ಮದ್‌ ಅಲ್ಫಾಜ್‌ ಗೂಂಡಾ ಕಾಯ್ದೆಯಡಿ ಬಂಧನ

ಮಹಮ್ಮದ್ ಅಲ್ಫಾಜ್


ಬೈಂದೂರು,: ಬೈಂದೂರು ಪೊಲೀಸ್ ಠಾಣೆಯ ರೌಡಿಶೀಟರ್ ಕುಖ್ಯಾತ “ಗರುಡ ಗ್ಯಾಂಗ್‌”ನಲ್ಲಿ ಸಕ್ರಿಯ ಸದಸ್ಯ ಮಹಮ್ಮದ್‌ ಅಲ್ಫಾಜ್‌ ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾನೆ.

ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್‌ ಅಲ್ಫಾಜ್‌ (25), ತಂದೆ ಮೊಹಮ್ಮದ್‌ ಅಶ್ರಫ್‌, ಕಿರಿಮಂಜೇಶ್ವರ ಗ್ರಾಮದ ಜನತಾ ಕಾಲೋನಿ ನಿವಾಸಿಯಾಗಿದ್ದು, ಪ್ರಸ್ತುತ ಕುಂದಾಪುರ ಕಸಬಾ ಗ್ರಾಮದಲ್ಲಿ ವಾಸವಾಗಿದ್ದಾನೆ. ಈತನ ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಆಧರಿಸಿ, ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರು 24-04-2026 ರಂದು ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಿದ್ದಾರೆ.

ಆರೋಪಿಯ ವಿರುದ್ಧ ಉಡುಪಿ ಜಿಲ್ಲೆಯ ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ ಹಾಗೂ ಕುಂದಾಪುರ ನಗರ ಠಾಣೆಗಳ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಯಲ್ಲಿಯೂ ಪ್ರಕರಣಗಳು ದಾಖಲಾಗಿವೆ. ಒಟ್ಟು 10 ಪ್ರಕರಣಗಳಲ್ಲಿ ಕೊಲೆಯತ್ನ (2), ದರೋಡೆ (1), ದರೋಡೆ ಯತ್ನ (1), ಹಲ್ಲೆ (1), ಅಕ್ರಮ ಕೂಟ (2), ಅಪಹರಣ (1), ಮಾದಕ ವಸ್ತು ಮಾರಾಟ (1) ಸೇರಿದಂತೆ ಇತರ ಪ್ರಕರಣಗಳು ಸೇರಿವೆ. ಇವುಗಳಲ್ಲಿ ಒಂದು ಪ್ರಕರಣ ಖುಲಾಸೆಯಾಗಿದ್ದು, ಎಂಟು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಇನ್ನೊಂದು ಪ್ರಕರಣ ತನಿಖೆಯಲ್ಲಿದೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಅಧಿಕಾರಿಗಳು ಆದೇಶ ನೀಡಿದ್ದಾರೆ.