ಇಸ್ಲಾಮಾಬಾದ್: ಸುಮಾರು ಎರಡು ತಿಂಗಳಿನಿಂದನಡೆಯುತ್ತಿರುವ ಯುದ್ಧಕ್ಕೆ ವಿರಾಮ ನೀಡುವ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ಆಯೋಜಿಸಲಾಗಿದ್ದ ಎರಡನೇ ಸುತ್ತಿನ ಸಂಧಾನ ಸಭೆಯಲ್ಲಿ ಭಾಗವಹಿಸದಿರಲು ಇರಾನ್ ನಿರ್ಧರಿಸಿದೆ. ಇದರಿಂದಾಗಿ ಏಪ್ರಿಲ್ 22ಕ್ಕೆ ಅಂತ್ಯಗೊಳ್ಳಲಿರುವ ಕದನ ವಿರಾಮವನ್ನು ವಿಸ್ತರಿಸುವ ಪ್ರಯತ್ನಗಳಿಗೆ ಭಾರಿ ಹಿನ್ನಡೆಯಾಗಿದೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ (IRNA) ಭಾನುವಾರ ವರದಿ ಮಾಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಂಧಾನಕಾರರು ಸೋಮವಾರ ಇಸ್ಲಾಮಾಬಾದ್‌ಗೆ ತಲುಪಲಿದ್ದಾರೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಈ ಅಚ್ಚರಿಯ ನಿರ್ಧಾರ ಕೈಗೊಂಡಿದೆ.
ಅಮೆರಿಕದ ಅತಿಯಾದ ಬೇಡಿಕೆಗಳು, ಅವಾಸ್ತವಿಕ ನಿರೀಕ್ಷೆಗಳು ಮತ್ತು ಪದೇ ಪದೇ ಬದಲಾಗುತ್ತಿರುವ ನಿಲುವುಗಳೇ ಈ ಸಂಧಾನದಿಂದ ಹಿಂದೆ ಸರಿಯಲು ಕಾರಣ ಎಂದು ಇರಾನ್ ವಿದೇಶಾಂಗ ಇಲಾಖೆ ದೂರಿದೆ. ಮುಖ್ಯವಾಗಿ, ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಧಂಧನವು ಕದನ ವಿರಾಮದ ಉಲ್ಲಂಘನೆಯಾಗಿದೆ ಎಂದು ಟೆಹ್ರಾನ್ ಕಿಡಿಕಾರಿದೆ.
