ಉಡುಪಿ: ಜಗತ್ತಿಗೆ ಕಷ್ಟ ನೀಡುವ ಸ್ವಾರ್ಥಿಗಳಿಗೆ ರುದ್ರ ದೇವರ ಪಾಠ: ಕಾಣಿಯೂರುಶ್ರೀ



ಉಡುಪಿ: ಸಮುದ್ರಮಥನ ವೇಳೆ ಬಂದ ವಿಷವನ್ನು ಜಗತ್ತಿನ ಕಂಟಕ ನಿವಾರಣೆಗಾಗಿ ಕುಡಿದು ನೀಲ ಕಂಠನಾದ ಮಹಾರುದ್ರ ದೇವರಿಂದ ತಮ್ಮ ಸುಖಕ್ಕಾಗಿ ಜಗತ್ತಿಗೆ ಕಷ್ಟ ನೀಡುತ್ತಿರುವ ಜನ-ನಾಯಕರು ಪಾಠ ಕಲಿಯಬೇಕು ಎಂದು ಕಾಣಿಯೂರು ಮಠದ ಶ್ರೀವಿದ್ಯವಲ್ಲಭ ತೀರ್ಥ ಶ್ರೀಪಾದರು ಹೇಳಿದ್ದಾರೆ.



ಅವರು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ದೇವಳದ ನಾಡೋಜ ಡಾ. ಜಿ.ಶಂಕರ್ ವೇದಿಕೆಯಲ್ಲಿ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಧಾರ್ಮಿಕ ಪ್ರಜ್ಞೆ, ಶ್ರದ್ಧೆಯಿಂದ ಜನರ  ಮನಸ್ಸು ಚೆನ್ನಾಗಿದ್ದರೆ ಸುಖ, ನೆಮ್ಮದಿ ಹೊಂದಲು ಸಾಧ್ಯ. ಜಗತ್ತಿನ ಕ್ಷೋಭೆ, ಸಮಸ್ಯೆ, ಯುದ್ಧಕ್ಕೆ ನಾಯಕರಲ್ಲಿರುವ ದ್ವೇಷ,  ಮತ್ಸರ, ಸ್ವಾರ್ಥವನ್ನು ಮನಸ್ಸಿನಿಂದ ಹೊರ ಹಾಕಿದರೆ ನೆಮ್ಮದಿ, ಶಾಂತಿ ಹೊಂದಲು ಸಾಧ್ಯ. ತಾಳ್ಮೆ ಕಳೆದುಕೊಳ್ಳದೆ, ಉತ್ತಮ ಚಿಂತನೆಗೆ  ಗಟ್ಟಿ ಮನಸ್ಸು ಹೊಂದಲು ದೇವರ ಅನುಗ್ರಹ ಬೇಕು ಎಂದು ಹೇಳಿದರು.



ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೇವಳದ ಪ್ರಧಾನ ಅರ್ಚಕ ಪಿ.ವಾಸುದೇವ ಉಪಾಧ್ಯ ಹಾಗೂ ರಮಾ ಅವರನ್ನು ಡಾ.ಜಿ.ಶಂಕರ್ ವತಿಯಿಂದ ಸನ್ಮಾನಿಸಲಾಯಿತು.

ಉದ್ಯಮಿ ಪುರುಷೋತ್ತಮ ಶೆಟ್ಟಿ, ದಕ ಮೊಗವೀರ ಮಹಾ ಜನಸಂಘ(ಉಚ್ಚಿಲ) ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ,  ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ.ಪ್ರಭಾಕರ್ ಶೆಟ್ಟಿ ಕೆ.,ಶೇಖರ್ ಶೆಟ್ಟಿ,  ಶಮಿತಾ ಎಸ್.ಭಂಡಾರಿ, ಯು.ಸುದೇಶ್ ಶೇಟ್, ದಿನೇಶ್ ಪುತ್ರನ್, ವಿದ್ಯಾಲತಾ ಯು. ಶೆಟ್ಟಿ , ರಾಜೇಶ್ ಉಪಸ್ಥಿತರಿದ್ದರು.

ಶ್ರೀದೇವಿ ಪ್ರಾರ್ಥಿಸಿದರು. ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಬನ್ನಂಜೆ ಸ್ವಾಗತಿಸಿದರು. ವಾಸ್ತುತಜ್ಞ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಪ್ರಾಸ್ತಾವಿಕ ಮಾತನಾಡಿದರು.