ಇರಾನ್ ನೊಂದಿಗೆ ಕದನ ವಿರಾಮ ವಿಸ್ತರಿಸಿದ ಟ್ರಂಪ್‌: ಆದರೆ ಹೊರ್ಮುಜ್ ದಿಗ್ವಂಧನ ಮುಂದುವರಿಕೆ



ವಾಷಿಂಗ್ಟನ್: ಇರಾನ್ ಜತೆಗಿನ ಕದನ ವಿರಾಮ ವಿಸ್ತರಣೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದು, ಇರಾನಿನ ನಾಯಕರು ಏಕೀಕೃತ ಪ್ರಸ್ತಾವನೆಯನ್ನು ಮಂಡಿಸುವವರೆಗೆ ಮತ್ತು ನಡೆಯುತ್ತಿರುವ ಚರ್ಚೆಗಳು ಮುಕ್ತಾಯಗೊಳ್ಳುವವರೆಗೆ ಅದು ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.

ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಪಾಕಿಸ್ಥಾನವು ಮತ್ತಷ್ಟು ಮಿಲಿಟರಿ ಕ್ರಮವನ್ನು ವಿಳಂಬಗೊಳಿಸಲು ಮತ್ತು ರಾಜತಾಂತ್ರಿಕತೆಗೆ ಸಮಯವನ್ನು ನೀಡಲು ವಿನಂತಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಅಧಿಕೃತ ಹೇಳಿಕೆಯಲ್ಲಿ, "ಅಸಿಮ್ ಮುನೀ‌ರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್‌ ಸೇರಿದಂತೆ ಪಾಕಿಸ್ಥಾನದ ನಾಯಕತ್ವದ ನೇರ ಮನವಿಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ವಿವರಿಸಿದ್ದಾರೆ.

"ನಮ್ಮ ಸೇನೆಯು ದಿಬ್ಬಂಧನವನ್ನು ಮುಂದುವರಿಸಲು,ಇತರ ಎಲ್ಲ ವಿಷಯಗಳಲ್ಲಿ ಸಿದ್ಧರಾಗಿರಲು ಮತ್ತು ಸಮರ್ಥರಾಗಿರಲು ನಾನು ನಿರ್ದೇಶಿಸಿದ್ದೇನೆ. ಅವರು ಪ್ರಸ್ತಾವನೆ ಸಲ್ಲಿಸುವವರೆಗೆ ಮತ್ತು ಚರ್ಚೆಗಳು ಒಂದಲ್ಲ ಒಂದು ರೀತಿಯಲ್ಲಿ ಮುಕ್ತಾಯಗೊಳ್ಳುವವರೆಗೆ ಕದನ ವಿರಾಮವನ್ನು ವಿಸ್ತರಿಸುತ್ತೇನೆ" ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮಂಗಳವಾರ ನಿಗದಿಯಂತೆ ಇಸ್ಲಾಮಾಬಾದ್‌ಗೆ ಬಂದಿರಲಿಲ್ಲ. ವಾಷಿಂಗ್ಟನ್‌ನಲ್ಲಿಯೇ ಇದ್ದರು, ನಂತರ ಅವರು ಇನ್ನು ಮುಂದೆ ಪ್ರವಾಸ ಮಾಡುವುದಿಲ್ಲ ಎಂದು ಶ್ವೇತಭವನ ವರದಿಗಾರರಿಗೆ ದೃಢಪಡಿಸಿದ್ದರು.

ಅಮೆರಿಕ-ಇರಾನ್ ಎರಡು ವಾರಗಳ ಕದನ ವಿರಾಮವು ಇಂದು(ಬುಧವಾರ) ಅಂತ್ಯಗೊಂಡಿದ್ದು ಈಗ ಮತ್ತೆ ವಿಸ್ತರಣೆಯಾಗಿದೆ. ವಿಸ್ತರಣೆ ಘೋಷಣೆಗೂ ಮುನ್ನ ಟ್ರಂಪ್ ಇರಾನ್‌ಗೆ ಹೊಸ ಎಚ್ಚರಿಕೆ ನೀಡಿ 'ಒಪ್ಪಂದಕ್ಕೆ ಇರಾನ್ ಸಹಿ ಹಾಕದಿದ್ದರೆ ಬಾಂಬ್ ಮಳೆ ಸುರಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಅವರು ಹೇಳಿದ್ದರು.

ಟ್ರಂಪ್ ಘೋಷಣೆಗೆ ಕೆಲವೇ ಗಂಟೆಗಳ ಮೊದಲು, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಛಿ ಎಕ್ಸ್ ಪೋಸ್ಟ್ ಮಾಡಿ, ಇರಾನಿನ ಬಂದರುಗಳ ದಿಗ್ಭಂಧನ ಯುದ್ದದ ಕೃತ್ಯ ಮತ್ತು ಕದನ ವಿರಾಮದ ಉಲ್ಲಂಘನೆ ಎಂದು ಕರೆದಿದ್ದರು.

ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಸಿಬಂದಿಗಳನ್ನು ಬಂಧಿಸುವುದರಿಂದ ಉದ್ವಿಗ್ನತೆ ಹೆಚ್ಚಾಗುತ್ತದೆ ಎಂದು ಅವರು ಎಚ್ಚರಿಸಿ, ಇರಾನ್ ಗೆ ತನ್ನ ಹಿತಾಸಕ್ತಿಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಮತ್ತು ಒತ್ತಡವನ್ನು ವಿರೋಧಿಸುವುದು ಎಂದು ತಿಳಿದಿದೆ ಎಂದು ಪ್ರತಿಪಾದಿಸಿದ್ದರು.