ಉಡುಪಿ: ಸುದೀಪ್ ರೈ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಎಎಸ್ಪಿಗೆ ಕ. ರ.ವೇ ಮನವಿ



ಉಡುಪಿ: ನೆಲ್ಯಾಡಿ ಮೂಲದ ಸುದೀಪ್ ರೈ ಕೆಲವು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತರಾಗಿದ್ದು ಈ ಸಾವಿನ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಉಡುಪಿ ಜಿಲ್ಲಾ ಘಟಕದ ವತಿಯಿಂದ ಎಎಸ್ಪಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕ ರ ವೇ ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ರವರು " ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣುತ್ತಿದ್ದರೂ ಈ ಸಾವಿನ ಬಗ್ಗೆ ಹಲವಾರು ಊಹಾ ಪೋಹಗಳು ಕೇಳಿ ಬರುತ್ತಿವೆ.  ಸುದೀಪ್ ರನ್ನು ಮೊದಲು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.  ಈ ಸಂದರ್ಭದಲ್ಲಿ ನಾನು ಸತತ 3 ದಿನ ಸುದೀಪ್ ನ ಸಂಪರ್ಕದಲ್ಲಿದ್ದೆ. ಈ ಸಂದರ್ಭದಲ್ಲಿ ಅವರು ತನ್ನ ಹೆಂಡತಿ ತನ್ನ ತಾಯಿಯೊಂದಿಗೆ ನಡೆದುಕೊಂಡ ರೀತಿ ಹಾಗೂ ತನಗೆ ನೀಡುತ್ತಿರುವ ಮಾನಸಿಕ ಕಿರುಕುಳ ಹಾಗೂ ತನಗೆ ಮಾಡಿರುವ ಮೋಸದ ಬಗ್ಗೆ ತಿಳಿಸಿರುತ್ತಾರೆ. ವಿಷ ಯಾವ ರೀತಿ ಸೇವಿಸಿದ್ದೀರಿ ಎಂದು ಕೇಳಿದರೆ ಎಷ್ಟೇ ಆಗಲಿ, ಅವಳು ನನ್ನ ಹೆಂಡತಿ ಆದದ್ದಾಯಿತು. ಇನ್ನು ಮುಂದೆ ಸರಿ ಮಾಡಿಕೊಂಡು ಹೋಗುವ ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು. ತಾನೇ ವಿಷ ಸೇವಿಸಿರುವ ಬಗ್ಗೆ ಯಾವತ್ತೂ ಹೇಳಿಕೊಂಡಿಲ್ಲ. ಹಾಗಾಗಿ ನಮಗೆ ಈ ಸಾವಿನ ಬಗ್ಗೆ ಸಂಶಯ ಮೂಡುತ್ತದೆ." ಎಂದು ಹೇಳಿದ್ದಾರೆ. 

ಈ ಸಂದರ್ಭದಲ್ಲಿ ಕ ರ ವೇ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಮಹಿಳಾ ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಿಲ್ಲಾ ಘಟಕದ ಉಪಾಧ್ಯಕ್ಷ ಅಲ್ಫೊನ್ಸೋ ಮೆನೆಜಸ್, ಸಲಹೆಗಾರ ಸವಿತಾ ಹಾಗೂ ಸಂಘಟನೆಯ ಪ್ರಮುಖರಾದ ನಾಗರಾಜ್,  ಧರ್ಮ ಮತ್ತು ಪಾಂಡು ಉಪಸ್ಥಿತರಿದ್ದರು.