ಬೈಂದೂರು: ಶನಿವಾರ ಸಂಜೆ ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಅಪಘಾತ ಕಾರು ಹಾಗೂ ಟ್ರಕ್ ನಡುವೆ ನಡೆದಿದೆ. ಅಪಘಾತದಲ್ಲಿ ಬೆಂಗಳೂರಿನ ಮಮತಾ (36) ಹಾಗೂ ಧೃತಿಕ (14 ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾನ್ನವಿ (12) ಹಾಗೂ ರಾಘು ( 40) ಸಹಿತ ಮತ್ತಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾವನ್ನಪ್ಪಿದವರು ಮತ್ತು ಗಾಯಾಳುಗಳ ಕುಟುಂಬ ಸದಸ್ಯರು ಬೆಂಗಳೂರಿನವರಾಗಿದ್ದು, ರಜೆ ನಿಮಿತ್ತ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮುರುಡೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಎಂ ಎಚ್ ಐ ತುರ್ತು ಸ್ಪಂದನ ತಂಡದ ಎರಡು ಅಂಬುಲೆನ್ಸ್ ಗಳಲ್ಲಿ ಗಾಯಾಳುಗಳನ್ನು ಹಾಗೂ ಶವಗಳನ್ನು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆ ಕೊಂಡೊಯ್ಯಲಾಯಿತು.ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ, ಬೈಂದೂರು ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು, ಒನ್ ವನ್ ಟು ಸಿಬ್ಬಂದಿ, ಹೈವೇ ಪೆಟ್ರೋಲ್ ಸಿಬ್ಬಂದಿ ಮತ್ತು ಐ ಆರ್ ಬಿ ಸಿಬ್ಬಂದಿಗಳು ಭೇಟಿ ನೀಡಿದರು. ಘಟನಾ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ಕೆಲವರು ಗಾಯಾಳುಗಳನ್ನು ಹಾಗೂ ಶವಸಾಗಾಟ ಮಾಡಲು ಸಹಕರಿಸಿದರು.ತುರ್ತುಸ್ಪಂದನಾ ತಂಡದ ಇಬ್ರಾಹಿಂ ಗಂಗೊಳ್ಳಿ, ವಿಕಾಸ್ ಮೊಗವೀರ ಹಾಗೂ ಪ್ರಶಾಂತ ನಾಯಕವಾಡಿ ಇವರು ಗಾಯಾಳುಗಳನ್ನು ಹಾಗೂ ಶವಗಳನ್ನು ಸಾಗಿಸಲು ಸಹಕರಿಸಿದರು.

