ಮಣಿಪುರ ಜನಾಂಗೀಯ ಹಿಂಸೆ: 58,821 ಜನ ನಿರ್ವಸಿತರು , 7,894 ಮನೆಗಳು ಸಂಪೂರ್ಣ ನಾಶ ! RTI ಮೂಲಕ ಅಚ್ಚರಿ ಮಾಹಿತಿ ಬಹಿರಂಗ

File photo


ಇಂಫಾಲ: ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಿಂದ 2023 ರಿಂದ ಈ ವರ್ಷದ ಮಾರ್ಚ್ ಅಂತ್ಯದವರೆಗೆ 58,821 ಜನರು ನಿರ್ವಸಿತಗರಾಗಿದ್ದಾರೆ ಎಂದು ರಾಜ್ಯ ಸರ್ಕಾರ ಬುಧವಾರ ತಿಳಿಸಿದೆ.

ಮಣಿಪುರ ಕಾಂಗ್ರೆಸ್ ನಾಯಕ ಹರೇಶ್ವರ್ ಗೋಸ್ವಾಮಿ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ (RTI) ಅರ್ಜಿಗೆ ಏಪ್ರಿಲ್ 20 ರಂದು ಗೃಹ ಸಚಿವಾಲಯವು ಈ ಅಂಕಿಅಂಶಗಳನ್ನು ನೀಡಿದೆ.

ಜನಾಂಗೀಯ ಹಿಂಸಾಚಾರದಲ್ಲಿ 217 ಜನರು ಮೃತಪಟ್ಟಿದ್ದಾರೆ. ಮೃತರ ವಾರಸುದಾರರಿಗೆ ನೀಡಿದ ಪರಿಹಾರದ ಆಧಾರದ ಮೇಲೆ ಈ ಅಂಕಿ ಅಂಶ ನೀಡಲಾಗಿದೆ.

2026 ಮಾರ್ಚ್ ಅಂತ್ಯದವರೆಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 174 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳಲ್ಲಿ ಸಾವಿರಾರು ಜನರು ಆಶ್ರಯ ಪಡೆದಿದ್ದಾರೆ ಎಂದು ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ

.ಜನಾಂಗೀಯ ಹಿಂಸಾಚಾರದ ಪರಿಣಾಮ ಇಲ್ಲಿಯವರೆಗೂ 7,894 ಮನೆಗಳು ಸಂಪೂರ್ಣ ನಾಶವಾಗಿದ್ದು 2,646 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಇಲಾಖೆ ಮಾಹಿತಿ ನೀಡಿದೆ.

ಸಂತ್ರಸ್ತರಿಗೆ ಮಣಿಪುರ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ 3,000 ತಾತ್ಕಾಲಿಕ (ಪ್ರಿ-ಫ್ಯಾಬ್ರಿಕೇಟೆಡ್) ಮನೆಗಳನ್ನು ನಿರ್ಮಿಸಿದೆ.

ನಿರ್ವಸಿತರಾದವರ ಮಾಹಿತಿ ಕಲೆ ಹಾಕಲು ನಮಗೆ ಏಳು ತಿಂಗಳ ಬೇಕಾಯಿತು ಎಂದು ಹರೇಶ್ವರ್ ಗೋಸ್ವಾಮಿ ಹೇಳಿದ್ದಾರೆ.

ಮಣಿಪುರದ ಕಣಿವೆಯಲ್ಲಿ ಮೈತೇಯಿ ಸಮುದಾಯ ಮತ್ತು ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುವ ಕುಕಿ ಸಮುದಾಯಗಳ ನಡುವೆ 2023ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು.