![]() |
| ಸಾಂದರ್ಭಿಕ ಚಿತ್ರ |
ಉಡುಪಿ: ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯ ಮಾತು ನಂಬಿ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ದೂರುದಾರ ಜಯಂತ್ ಅವರಿಗೆ ಎರಡು ವರ್ಷಗಳ ಹಿಂದೆ ಟೆಲಿಗ್ರಾಂ ಅ್ಯಪ್ ಮೂಲಕ ಕಾರ್ತಿಕ್ ಎಂಬಾತ ಪರಿಚಯವಾಗಿದ್ದು, ದಿನಾಂಕ 15/01/2026 ರಂದು ಅದೇ ವ್ಯಕ್ತಿ ವಾಟ್ಸಪ್ ಮೂಲಕ ಸಂಪರ್ಕಿಸಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ಹೆಚ್ಚಿನ ಲಾಭ ನೀಡುವುದಾಗಿ ಭರವಸೆ ನೀಡಿದ್ದಾನೆ. ಅನುಮಾನ ವ್ಯಕ್ತಪಡಿಸಿದ ಜಯಂತ್ ಅವರಿಗೆ ಆರೋಪಿಯು ತನ್ನ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಪ್ರತಿ ಹಾಗೂ ಭಾವಚಿತ್ರವನ್ನು ಕಳುಹಿಸಿ ನಂಬಿಕೆ ಹುಟ್ಟಿಸಿದ್ದಾನೆ. ಆ ದಾಖಲೆಗಳಲ್ಲಿ ಮಂಗಳೂರಿನ ಕಸಬಾ ಬೇಂಗ್ರೆ ನಿವಾಸಿ ಮಹಮ್ಮದ್ ಶಫೀಕ್ ಎಂಬ ಹೆಸರು ಉಲ್ಲೇಖಗೊಂಡಿತ್ತು.
ಈ ಮಾಹಿತಿಯನ್ನು ನಂಬಿದ ದೂರುದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ಭಾವಿಸಿ, ಆರೋಪಿಯು ವಾಟ್ಸಪ್ ಮೂಲಕ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ. 26,55,000/- ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ಮೊತ್ತವನ್ನಾಗಲಿ, ಲಾಭಾಂಶವನ್ನಾಗಲಿ ಮರಳಿ ನೀಡದೇ ಆರೋಪಿಯು ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಅವರು ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2026 ರಂತೆ ಪ್ರಕರಣ ದಾಖಲಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಸಿ), 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಅಡಿಯಲ್ಲಿ ತನಿಖೆ ನಡೆಯುತ್ತಿದೆ.
