ತಿಂಗಳ ಮಟ್ಟಿಗೆ ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಅನುಮತಿ ನೀಡಿದ ಅಮೆರಿಕ



ನವದೆಹಲಿ: ಇರಾನ್‌ ಜೊತೆಗಿನ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆ, ಭಾರತೀಯ ಸಂಸ್ಕರಣಾಗಾರಗಳು ರಷ್ಯಾದ ತೈಲವನ್ನು ಖರೀದಿಸಲು ತಾತ್ಕಾಲಿಕವಾಗಿ 30 ದಿನಗಳ ವಿನಾಯಿತಿ ನೀಡುತ್ತಿರುವುದಾಗಿ ಯುಎಸ್ ಖಜಾನೆ ಇಲಾಖೆ ಘೋಷಿಸಿದೆ.

"ಅಧ್ಯಕ್ಷ ಟ್ರಂಪ್ ಅವರ ಇಂಧನ ಕಾರ್ಯಸೂಚಿಯಿಂದಾಗಿ ತೈಲ ಮತ್ತು ಅನಿಲ ಉತ್ಪಾದನೆ ಇದುವರೆಗೆ ದಾಖಲಾದ ಅತ್ಯುನ್ನತ ಮಟ್ಟಕ್ಕೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ನಿರಂತರವಾಗಿರುವಂತೆ ಮಾಡಲು, ಯುಎಸ್​ ಖಜಾನೆ ಇಲಾಖೆಯು ಭಾರತೀಯ ಸಂಸ್ಕರಣಾಗಾರಗಳು ರಷ್ಯಾದ ತೈಲವನ್ನು ಖರೀದಿಸಲು ತಾತ್ಕಾಲಿಕ 30 ದಿನಗಳ ವಿನಾಯಿತಿಯನ್ನು ನೀಡುತ್ತಿದೆ" ಎಂದು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಗುರುವಾರ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ "ಉದ್ದೇಶಪೂರ್ವಕ ಅಲ್ಪಾವಧಿಯ ಕ್ರಮ" ರಷ್ಯಾ ಸರ್ಕಾರಕ್ಕೆ ಗಮನಾರ್ಹ ಆರ್ಥಿಕ ಪ್ರಯೋಜನವನ್ನು ನೀಡುವುದಿಲ್ಲ, ಏಕೆಂದರೆ ಈ ಅನುಮತಿ ಈಗಾಗಲೇ ಸಮುದ್ರದಲ್ಲಿ ಸಿಲುಕಿರುವ ತೈಲವನ್ನು ಒಳಗೊಂಡ ವಹಿವಾಟುಗಳನ್ನು ಮಾತ್ರ ಅಧಿಕೃತಗೊಳಿಸಲಿದೆ.

"ಭಾರತವು ಅಮೆರಿಕದ ಪ್ರಮುಖ ಹಾಗೂ ಅತ್ಯಗತ್ಯ ಪಾಲುದಾರ. ಮತ್ತು ಭಾರತವು ಅಮೆರಿಕದ ತೈಲ ಖರೀದಿಯನ್ನು ಹೆಚ್ಚಿಸುತ್ತದೆ ಎಂದು ನಾವು ಸಂಪೂರ್ಣವಾಗಿ ನಿರೀಕ್ಷಿಸುತ್ತೇವೆ. ಈ ತಾತ್ಕಾಲಿಕ ಕ್ರಮವು ಜಾಗತಿಕ ಇಂಧನವನ್ನು ಒತ್ತೆಯಾಳಾಗಿ ತೆಗೆದುಕೊಳ್ಳುವ ಇರಾನ್ ಪ್ರಯತ್ನದಿಂದ ಉಂಟಾದ ಒತ್ತಡವನ್ನು ಕಡಿಮೆ ಮಾಡುತ್ತದೆ" ಎಂದು ಬೆಸೆಂಟ್ ಹೇಳಿದರು.