ಉಡುಪಿ: ಹೊಟೇಲ್ ಉದ್ಯಮಿಗಳು ಕಟ್ಟಿಗೆ, ವಿದ್ಯುತ್ ಸೇರಿದಂತೆ ಪರ್ಯಾಯ ಉರುವಲು ಬಳಸಿ - ಜಿಲ್ಲಾಧಿಕಾರಿ ಸಲಹೆ



ಉಡುಪಿ : ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಯಾಗಿರುವುದರಿಂದ ದೇಶದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಗಳ ಸರಬರಾಜಿನಲ್ಲಿ ಉಂಟಾಗಿರುವ ವ್ಯತ್ಯಯದಿಂದ ಹೊಟೇಲ್ ಉದ್ಯಮಿಗಳಿಗೆ ತೊಂದರೆಯಾಗಿದ್ದು, ಆದ್ದರಿಂದ ಅವರು ಪರ್ಯಾಯ ಉರುವಲು ಗಳಾದ ಕಟ್ಟಿಗೆ ಅಥವಾ ವಿದ್ಯುತ್ ಬಳಕೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಜಿಲ್ಲೆಯ ಹೊಟೇಲ್ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ವಾಣಿಜ್ಯ ಬಳಕೆ ಅನಿಲ ಸಿಲಿಂಡ‌ರ್ ಸರಬರಾಜು ಸಮಸ್ಯೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಕರೆ ನೀಡಿದರು.

ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ. ವಾಣಿಜ್ಯ ಬಳಕೆಯ ಅನಿಲ ಹೊರ ದೇಶಗಳಿಂದ ಪೂರ್ಣ ಪ್ರಮಾಣದಲ್ಲಿ ಆಮದಾಗುತ್ತಿದ್ದು, ಯುದ್ಧ ಭೀತಿಯಿಂದಾಗಿ ಅನಿಲ ಆಮದು ನಿಗದಿತ ಪ್ರಮಾಣದಲ್ಲಿ ನಡೆಯದೇ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾ ಗಿದೆ. ಇದು ತಾತ್ಕಾಲಿಕ ಸಮಸ್ಯೆಯಾಗಿದೆ. ಆದರೂ ಇದರ ಬದಲು ಪರ್ಯಾಯ ಉರುವಲುಗಳ ಬಳಕೆಯೊಂದೇ ಸದ್ಯದ ಮಾರ್ಗವಾಗಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಕೆಲವು ಹೊಟೇಲ್ ಉದ್ಯಮಿಗಳು ಕಟ್ಟಿಗೆ, ವಿದ್ಯುತ್ ಸೇರಿದಂತೆ ವಿವಿಧ ಪರ್ಯಾಯ ಉರುವಲುಗಳನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಹೊಟೇಲ್ ಉದ್ಯಮಿಗಳು ಇದಕ್ಕೆ ಒತ್ತು ನೀಡುವ ಮೂಲಕ ಹೋಟೆಲ್ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗವಕಾಶ ನಷ್ಟವಾಗದಂತೆ ಮುಂದುವರಿಸುವುದು ಉತ್ತಮ ಎಂದು ಕಿವಿಮಾತು ಹೇಳಿದರು.