ಉದ್ಯಾವರ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಪಾದಚಾರಿ ಮಹಿಳೆಗೆ ಕ್ರೇನ್ ಡಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟ ಘಟನೆ ಸಂಭವಿಸಿದೆ.
ಕಾರವಾರ ಮೂಲದ ದಿವ್ಯಾ (45) ಮೃತ ಮಹಿಳೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರ ಸಹಕಾರದಿಂದ ಖಾಸಗಿ ವಾಹನದಲ್ಲಿ ಮಹಿಳೆಯನ್ನು ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಟಾರ್ಜ್‌ಗೊಂಡ ಪುತ್ರಿಯನ್ನು ಕಾರವಾರದತ್ತ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಉದ್ಯಾವರ ಬಲಾಯಿಪಾದೆ ಬಳಿ ಯು-ಟರ್ನ್ ಪಡೆದು ಗುಡ್ಡೆಯಂಗಡಿ ಬಳಿಯ ಹೊಟೇಲ್‌ಗೆ ಉಪಾಹಾರಕ್ಕಾಗಿ ತೆರಳಿದ್ದರು. ಆ ವೇಳೆ ಪುತ್ರಿ ಕ್ರಿಕೆಟ್ ಬ್ಯಾಟ್ ಬೇಕು ಎಂದಿದ್ದಕ್ಕೆ ಮತ್ತೆ ರಸ್ತೆಯನ್ನು ದಾಟಿ ಮತ್ತೊಂದು ಬದಿಗೆ ತೆರಳಲು ಮುಂದಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ಈ ಪರಿಸರದಲ್ಲಿ ಪದೇ ಪದೇ ಅಪಘಾತಗಳಾಗುತ್ತಿದೆ. ಸರ್ವಿಸ್ ರಸ್ತೆಯ ಕಾಮಗಾರಿ ಆಗುತ್ತಿದ್ದು ಈ ಕಾಮಗಾರಿ ಆಮೆ ಗತಿಯಿಂದ ಸಾಗುತ್ತಿದ್ದು ಕೂಡಲೇ ಕಾಮಗಾರಿ ಮುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
