![]() |
| ಯಾಸ್ಮಿನ್ ಇಸ್ಲಾಮ್ |
ನವದೆಹಲಿ: ವುಮೆನ್ ಇಂಡಿಯಾ ಮೂವ್ಮೆಂಟ್‌ನ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಅವರು ಸರ್ಕಾರದ ನೀತಿಗಳು ಮತ್ತು ನಿಯಂತ್ರಣದ ವೈಫಲ್ಯಗಳು ದೇಶದಲ್ಲಿ ಇಂಧನ ಕೊರತೆಯನ್ನು ಉಂಟುಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಸಾಮಾನ್ಯ ಜನರು ಆರ್ಥಿಕ ಸಂಕಷ್ಟ ಮತ್ತು ಹಸಿವಿನತ್ತ ತಳ್ಳಲ್ಪಡುತ್ತಿದ್ದಾರೆ ಎಂದು ಅವರು ಹೇಳಿದರು. ಅಡುಗೆ ಅನಿಲ ಸೇರಿದಂತೆ ಅಗತ್ಯ ಇಂಧನಗಳನ್ನು ಪಡೆಯುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿರುವುದು ಸಾಮಾನ್ಯ ನಾಗರಿಕರ ದಿನನಿತ್ಯದ ಜೀವನವನ್ನು ನೇರವಾಗಿ ಪ್ರಭಾವಿತಗೊಳಿಸುತ್ತಿದೆ, ಇದು ತಪ್ಪಿಸಿಕೊಳ್ಳಲಾಗದ ಸಂಕಷ್ಟವಲ್ಲ; ಬದಲಾಗಿ ಆಡಳಿತ ಮತ್ತು ನಿಯಂತ್ರಣದಲ್ಲಿ ಇರುವ ಗಂಭೀರ ಕೊರತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಸ್ರೇಲ್–ಇರಾನ್ ಸಂಘರ್ಷದ ಕುರಿತು ಉಲ್ಲೇಖಿಸಿದ ಯಾಸ್ಮಿನ್ ಇಸ್ಲಾಂ ಅವರು, ಅಡುಗೆ ಅನಿಲ ಸೇರಿದಂತೆ ಇತರೆ ಇಂಧನಗಳ ಅಕ್ರಮ ಮಾರುಕಟ್ಟೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಹೇಳಿದರು. “ಭಾರತದ ಇಂಧನ ಭದ್ರತೆ ಬಲವಾಗಿದೆ” ಹಾಗೂ “ದೇಶಕ್ಕೆ ಅಗತ್ಯವಾದ ಅನಿಲದ ದೊಡ್ಡ ಭಾಗವನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದೆ” ಎಂಬ ಸರ್ಕಾರದ ಹೇಳಿಕೆಗಳು ಈಗಿನ ಬೆಲೆ ಏರಿಕೆ ಮತ್ತು ಲಭ್ಯತೆಯ ಕೊರತೆಯ ವಾಸ್ತವಿಕತೆಗೆ ಸಂಪೂರ್ಣವಾಗಿ ವಿರುದ್ಧವಾಗಿವೆ. ಇಂತಹ ಹೇಳಿಕೆಗಳು ಪೊಳ್ಳು ಮಾತುಗಳಂತೆ ಕಾಣಿಸುತ್ತಿವೆ ಎಂದು ಅವರು ಟೀಕಿಸಿದರು.
ಇದು ಜನರಿಗೆ ಆಗುತ್ತಿರುವ ಅನ್ಯಾಯವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಂತಹ ಪಾರದರ್ಶಕ ಮತ್ತು ಜನಪರ ಇಂಧನ ವಿತರಣಾ ವ್ಯವಸ್ಥೆಯನ್ನು ಸರ್ಕಾರ ತಕ್ಷಣ ಯೋಜಿಸಬೇಕು. ಜೊತೆಗೆ ಅಕ್ರಮ ಮಾರುಕಟ್ಟೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
