ಉಡುಪಿಗೆ ತುರ್ತಾಗಿ ಪ್ರತ್ಯೇಕ ಉಡುಪಿ ಕಂದಾಯ (AC) ಉಪವಿಭಾಗ ಕಛೇರಿ ಬೇಕು ಎಂಬುದು ಬಹುದಿನಗಳ ಬೇಡಿಕೆ.ಈ ಬಗ್ಗೆ ಇಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿʼಸೋಜಾ ರವರು ಸದನದ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಗಮನ ಸೆಳೆದಿದ್ದದ್ದಾರೆ.
" ಮಾನ್ಯ ಅಧ್ಯಕ್ಷರೇ,
ಉಡುಪಿ ಜಿಲ್ಲೆಗೆ ಸಂಬಂಧಿಸಿದ ಅತ್ಯಂತ ಮಹತ್ವದ ಸಾರ್ವಜನಿಕ ಸಮಸ್ಯೆಯನ್ನು ಸದನದ ಗಮನಕ್ಕೆ ತರಲು ನಾನು ಬಯಸುತ್ತೇನೆ.
ಇತಿಹಾಸದ ಹಿನ್ನಲೆಯಲ್ಲಿ ನೋಡಿದರೆ, 1862ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ನಂತರ 1927ರಲ್ಲಿ ಆಡಳಿತಾತ್ಮಕ ಸೌಲಭ್ಯಕ್ಕಾಗಿ ಪುತ್ತೂರು, ಮಂಗಳೂರು ಮತ್ತು ಕುಂದಾಪುರ ಉಪವಿಭಾಗಗಳನ್ನು ರಚಿಸಲಾಯಿತು. ಆ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಕ್ಕೆ ಉಡುಪಿ, ಕಾರ್ಕಳ ಹಾಗೂ ಕುಂದಾಪುರ ತಾಲೂಕುಗಳನ್ನು ಸೇರಿಸಲಾಗಿತ್ತು.
1997ರ ಜುಲೈ 25ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತ್ಯೇಕವಾಗಿ ಉಡುಪಿ ಜಿಲ್ಲೆ ರಚನೆಯಾದ ನಂತರ, ಜಿಲ್ಲೆಯ ಕೇಂದ್ರ ಭಾಗದಲ್ಲಿ ಪ್ರತ್ಯೇಕ ಕಂದಾಯ ಉಪವಿಭಾಗ ಕಚೇರಿ ಅಗತ್ಯತೆ ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ 2019ರಲ್ಲಿ ಜಿಲ್ಲಾಡಳಿತವು ಹೊಸ ಉಪವಿಭಾಗ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ.
ಪ್ರಸ್ತುತ, ಕುಂದಾಪುರ ಉಪವಿಭಾಗದ ವ್ಯಾಪ್ತಿಗೆ ಜಿಲ್ಲೆಯ ಏಳು ತಾಲೂಕುಗಳ ಅರ್ಜಿಗಳು ಸೇರಿರುವುದರಿಂದ, ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ. ಪಹಣಿ ತಿದ್ದುಪಡಿ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳಿಗೆ ಜನರು ಕುಂದಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಸುಗಮತೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಉಡುಪಿಯಲ್ಲಿ ಪ್ರತ್ಯೇಕ ಕಂದಾಯ ಉಪವಿಭಾಗ (Assistant Commissioner Sub-Division) ಕಚೇರಿ ಸ್ಥಾಪನೆ ಅನಿವಾರ್ಯವಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ 19.07.2024ರಂದು ಜಿಲ್ಲಾಡಳಿತವು ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಆದುದರಿಂದ, ಮಾನ್ಯ ಕಂದಾಯ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಉಪವಿಭಾಗ ಕಚೇರಿ ಸ್ಥಾಪನೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.
