ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಅವರೇ ಅಧ್ಯಕ್ಷರಾಗಿರುವ ರಂಗಭೂಮಿ ಉಡುಪಿ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಜಂಟಿ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಮತ್ತು ಮಹಾರಾಷ್ಟ್ರದ ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಸಹಭಾಗಿತ್ವದಲ್ಲಿ ಮಾ.1ರಿಂದ 8ರವರೆಗೆ ಮೂರು ದಿನಗಳ ಕಾಲ ಉಡುಪಿಯ ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ದಕ್ಷಿಣ ಮಧ್ಯ ಭಾರತದ ರಾಜ್ಯಗಳ ಜಾನಪದ ಉತ್ಸವ, 'ರತ್ನಾಕರ ಉತ್ಸವ -2026 'ಉಡುಪಿಯ ಪ್ರೇಕ್ಷಕರಿಗೆ ಸಾಂಸ್ಕೃತಿಕ ಹಾಗೂ ಜಾನಪದದ ರಸದೌತಣವನ್ನೇ ಉಣ ಬಡಿಸಿತು.
2025ರಲ್ಲಿ ಇದೇ ವೇದಿಕೆಯಲ್ಲಿ 'ಕೇರಳದ ಜಾನಪದ ಕಲಾ ವೈಭವ'ವನ್ನು ಆಯೋಜಿಸಿದ್ದ ಡಾ.ತಲ್ಲೂರು ಅವರು, ಈ ಬಾರಿ ಉತ್ತರ ಭಾರತದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳ ವ್ಯಾಪ್ತಿಯ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗನ್ನು ಅಲ್ಲದೆ ಕರ್ನಾಟಕ ಕರಾವಳಿಯ ಜಾನಪದ ಕಲೆಗಳನ್ನು ಸೇರಿಸಿಕೊಂಡು ಈ 'ರತ್ನಾಕರ ಉತ್ಸವ -2026'ನ್ನು ಆಯೋಜಿಸಿದ್ದರು.
ಈ ಮೂರು ದಿನಗಳ ಕಾಲ ನಡೆದ ಈ ಉತ್ಸವಕ್ಕೆ ಭಾರತ ಸರಕಾರದಿಂದ ಸ್ಥಾಪಿತವಾದ ಏಳು ಸಾಂಸ್ಕೃತಿಕ ವಲಯ ಕೇಂದ್ರಗಳಲ್ಲಿ ಒಂದಾದ ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ಸಾಥ್ ನೀಡಿತ್ತು. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳ ವ್ಯಾಪ್ತಿಯಲ್ಲಿ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಪೋಷಿಸುವ, ಉತ್ತೇಜಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿರುವ ಈ ಸಂಸ್ಥೆಯ ನಿರ್ದೇಶಕಿ ಆಸ್ಥಾ ಎಂ. ಕಾರ್ಲೇಕರ್ ಅವರ ಸಹಕಾರದಲ್ಲಿ ಉತ್ತರ ಭಾರತದ ಹಲವಾರು ಜಾನಪದ ಸಂಘಟನೆಗಳು ಉಡುಪಿಗೆ ಆಗಮಿಸಿ, ಅಲ್ಲಿನ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಉಡುಪಿ ಜನತೆಗೆ ಪರಿಚಯಿಸಿದರು.
ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು, ಜಾನಪದ ನೃತ್ಯ, ಸಂಗೀತ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಉತ್ಸವಗಳ ಆಯೋಜನೆಗಳ ಮೂಲಕ ವಿವಿಧ ರಾಜ್ಯಗಳ ಕಲೆಗಳನ್ನು ಒಂದೆಡೆ ಸೇರಿಸುವ ಮೂಲಕ 'ವೈವಿಧ್ಯತೆಯಲ್ಲಿ ಏಕತೆ' ಯನ್ನು ಉತ್ತೇಜಿಸುವ ಕಾರ್ಯ ಈ ಉತ್ಸವದಿಂದ ನಡೆಯಿತು.
ಏನೆಲ್ಲಾ ಕಲಾ ಪ್ರಕಾರಗಳು : ಮಾರ್ಚ್ 6ರಂದು ಸಂಜೆ 6 ಗಂಟೆಗೆ ಈ ಉತ್ಸವಕ್ಕೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕೃತ ಚಾಲನೆ ನೀಡಿದರು. ಮೂರು ದಿನಗಳ ಕಾಲ ಸುಮಾರು 300 ಮಂದಿ ಕಲಾವಿದರು ವಿಭಿನ್ನ ಜಾನಪದ ಕಲಾಪ್ರಕಾರಗಳನ್ನು ಪ್ರದರ್ಶಿಸಲು ಅನುಕೂಲವಾಗುವಂತೆ 'ಜಾನಪದ ಕಲಾ ವೈವಿಧ್ಯ 1,2 ಮತ್ತು 3 ' ಎಂದು ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಆಂಧ್ರ ಪ್ರದೇಶದ ಉರುಮುಲು ನೃತ್ಯ, ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡ್‌ಗಳಲ್ಲಿ ಪ್ರಚಲಿತದಲ್ಲಿರುವ ಬಧಾಯಿ/ನೋರ್ತಾ ನೃತ್ಯ, ಮರಾಟಿ ಜಾನಪದ ರಂಗಭೂಮಿಯ ಲಾವಣಿ ನೃತ್ಯ ಪ್ರಕಾರ, ಮಹಾರಾಷ್ಟ್ರ ಮತ್ತು ಗೋವಾ ಕರಾವಳಿ ಪ್ರದೇಶದ ಮೀನುಗಾರ ಸಮುದಾಯದ ಕೋಲಿ ನೃತ್ಯ, ಮಹಾರಾಷ್ಟ್ರದ ವಾರ್ಲಿ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಜಾನಪದ ಟಾರ್ಪಾ ನೃತ್ಯ, ಛತ್ತೀಸ್‌ಗಢದ ಪ್ರಸಿದ್ದ ಜಾನಪದ ವಂತಿ ನೃತ್ಯ, ತೆಲಂಗಾಣದ ಗುಸ್ಸಾಡಿ ನೃತ್ಯ , ಕರ್ನಾಟಕದ ಕೆಲವು ಭಾಗಗಳು ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಚಲಿತವಿರುವ ಗೋಂದೋಳು, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಡುಬರುವ ಕೊರಗರ ಕುಣಿತ, ಮುಂಡಾಲ ಜನಾಂಗದ ವತಿಯಿಂದ ಮಾಯಿ ತಿಂಗಳ ಹುಣ್ಣಿಮೆಯ ಕಾಲದಲ್ಲಿ ಆಚರಿಸುವ ಕಂಗೀಲು ನೃತ್ಯ - ಮೊದಲಾದ ಜಾನಪದ ನೃತ್ಯ ಪ್ರಕಾರಗಳು ಮುದ್ದಣ ಮಂಟಪದಲ್ಲಿ ಅಪೂರ್ವವಾದ ಜಾನಪದ ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿದ್ದವು. ಸಭಿಕರು ಮೂರು ಗಂಟೆಗಳ ಕಾಲದ ಈ ಪ್ರದರ್ಶವನ್ನು ಎವೆಯೆಕ್ಕದೆ ವೀಕ್ಷಿಸಿ ಆನಂದಪಟ್ಟರು.
ಕರ್ನಾಟಕ ಕರಾವಳಿಯ ಜಾನಪದ ಕಲೆಗಳನ್ನು ನೋಡಿ ಆನಂದಿಸಿದರೆ ಸಾಲದು, ಅನ್ಯ ರಾಜ್ಯಗಳ ಜಾನಪದ, ಸಾಂಸ್ಕೃತಿಕ ಕಲೆಗಳನ್ನು ನಮ್ಮ ಜಿಲ್ಲೆಯ ಜನರು ವೀಕ್ಷಿಸಿ ಆನಂದ ಪಡಬೇಕು ಎಂಬ ಸದಾಶಯದೊಂದಿಗೆ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದು ಅವರ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡಿತು. ಇಂತಹ ಪ್ರದರ್ಶನ ಕೇವಲ ಡಾ.ತಲ್ಲೂರು ಅವರಿಂದ ಮಾತ್ರ ಸಂಘಟಿಸಲು ಸಾಧ್ಯ ಎಂಬ ಮಾತು ಸಭಾವಲಯದಲ್ಲಿ ಕೇಳಿಬಂತು.
