ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆ: ಹಲವು ಮಹತ್ವದ ನಿರ್ಣಯ



ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರ ನೇತೃತ್ವದಲ್ಲಿ  ಮಂಗಳೂರಿನ SDPI  ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯದ ಮಹಿಳೆಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಈ ಕೆಳಗಿನ ನಿರ್ಣಯಗಳನ್ನು  ಕೈಗೊಳ್ಳಲಾಯಿತು. 

ಬೆಂಗಳೂರಿನ ಕೋಗಿಲು ಬಡಾವಣೆ ಹಾಗೂ ತನಿ ಸಾಂದ್ರದಲ್ಲಿ ಸರ್ಕಾರವು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಿದ ಬಡ ಜನತೆಯ ಪುನರ್ವಸತಿ ಸೌಕರ್ಯ ಕಲ್ಪಿಸಬೇಕು. 

ಯಲಹಂಕದ ಕೋಗಿಲು ಬಡಾವಣೆ ಹಾಗೂ ಥಣಿಸಂದ್ರ ಪ್ರದೇಶದಲ್ಲಿ ನೂರಾರು ಬಡ ಕುಟುಂಬಗಳ ಮನೆಗಳಿಗೆ ಸರ್ಕಾರವು ಬುಲ್ಡೋಜರ್ಸ್ ಹರಿಸಿ ಧ್ವಂಸಗೊಳಿಸಿ ಎರಡು ತಿಂಗಳಾಗುತ್ತಾ ಬಂದರೂ ಇಂದಿಗೂ ಯಾವುದೇ ರೀತಿಯ ಪುನರ್ವಸತಿ ಸೌಕರ್ಯವನ್ನು ಕಲ್ಪಿಸಲಾಗಿಲ್ಲ.

ಅಧಿಕ್ರತ ದಾಖಲೆಗಳನ್ನು ಹೊಂದಿದ್ದರೂ ಸಹ , ಯಾವುದೇ ಪೂರ್ವ ನಿರ್ದೇಶನ ಇಲ್ಲದೆ  ಏಕಾಏಕಿ ಮನೆಗಳನ್ನು ಧ್ವಂಸಗೊಳಿಸಲಿರುವುದು ಕಾನೂನು ಬಾಹಿರ ಕ್ರತ್ಯವಾಗಿದ್ದರೂ ಕಡೇ ಪಕ್ಷ ಅಷ್ಟೇ ತ್ವರಿತಗತಿಯಲ್ಲಿ ಪುನರ್ವಸತಿ ಸೌಕರ್ಯವನ್ನು ಒದಗಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿತ್ತು.

ಆದರೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಈಗಲೂ ಮುಂದುವರಿದಿದೆ. ಸೂರಿನೊಂದಿಗೆ  ಶಾಲಾ ಬ್ಯಾಗ್ ಪುಸ್ತಕಗಳನ್ನು ಕಳೆದುಕೊಂಡಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಗರ್ಭಿಣಿಯರು,ವ್ರದ್ದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುರುತಿನ ಚೀಟಿ, ಆಧಾರ್ ಕಾರ್ಡ್ ಮುಂತಾದ ಅಗತ್ಯ ದಾಖಲೆಗಳು ಮನೆಗಳೊಂದಿಗೆ ನೆಲಸಮವಾಗಿದ್ದು ,

ಇದರಿಂದಾಗಿ  ಸರ್ಕಾರಿ ಯೋಜನೆಗಳ ಫಲಾನುಭವದಿಂದ ಆ ಕುಟುಂಬಗಳು ವಂಚಿತರಾಗುವ ಸಾಧ್ಯತೆಗಳು ಹೆಚ್ಚಾಗಿವೆ.ಆದುದರಿಂದ  ಸರ್ಕಾರವು ಮಕ್ಕಳು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಶೀಘ್ರವಾಗಿ 

ಸಂತ್ರಸ್ತರಿಗೆ ವಸತಿ ಯೋಜನೆಯನ್ನು ಒದಗಿಸಿ ಬದುಕಿನ ಹಕ್ಕನ್ನು ಖಾತರಿಪಡಿಸಬೇಕು. ಮಕ್ಕಳು ಮರಳಿ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮುಂದುವರಿಸಲು ವ್ಯವಸ್ಥೆ ಕಲ್ಪಿಸಬೇಕು.ಅದೇ ರೀತಿ ಅವರು ಕಳೆದುಕೊಂಡಿರುವ, ಸರ್ಕಾರವೇ ಈ ಹಿಂದೆ  ಒದಗಿಸಿರುಂತಹ ಅಗತ್ಯ ದಾಖಲೆಗಳನ್ನು ಮತ್ತೆ ಮರಳಿಸಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದಂತೆ ಕ್ರಮ ವಹಿಸಬೇಕು.

ಕೇಂದ್ರ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ   ಸಂಬಂಧಿಸಿ ಹಲವು  ಸಮಸ್ಯೆಗಳು ಜನರನ್ನು ಬಾಧಿಸುತ್ತಿದೆ.ಈ ಪ್ರಕ್ರಿಯೆ ತೀರ ಕಠಿಣವಾಗಿದ್ದು, ಇದು ಉದ್ದೇಶಪೂರ್ವಕವಾಗಿ ಮತದಾರರ  ದಾಖಲೆಯ ನೆಪವೊಡ್ಡಿ ಮಾತದಾನದ ಹಕ್ಕನ್ನು ಕಸಿಯುವ ಷಡ್ಯಂತ್ರವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದು ಜನತೆ ಭೀತಿಗೊಳಗಾಗಿದ್ದಾರೆ.

BLO ಸಹಿತವಾಗಿ ಹಲವು ನಾಗರಿಕರು  ಈ SIR ಕೆಲಸದ ಒತ್ತಡದ ಕಾರಣದಿಂದ ಹ್ರದಯಾಘಾತ , ಆತ್ಮಹತ್ಯೆಯ ಮೂಲಕ ಈಗಾಗಲೇ ಜೀವವನ್ನು ಕಳೆದುಕೊಂಡಂತಹ ವರದಿಗಳು ಪ್ರಕಟವಾಗಿದೆ.

ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರೇ ಇದರ ಬಲಿಪಶುಗಳಾಗುತ್ತಿರುವುದು ಕಂಡುಬರುತ್ತಿದೆ. ಚುನಾವಣಾ ಆಯೋಗವು ಸೂಚಿಸುತ್ತಿರುವ ದಾಖಲೆಗಳ ಸಾಮಾಜಿಕವಾಗಿ ಹಿಂದುಳಿದಿರುವ ಮಹಿಳೆಯರಲ್ಲಿ ಇರಲಾರದು. ಇದರಿಂದಾಗಿ ಮತದಾನದ ಹಕ್ಕನ್ನು ಮತ್ತು ನಾಗರಿಕತ್ವವನ್ನು ಕಳೆದುಕೊಂಡರೆ ಮಹಿಳೆಯರಿಗೆ ಯಾವುದೇ ಸರಕಾರಿ ಸೌಲಭ್ಯಗಳು ಸಿಗುವುದು ಅಸಂಭವ. 

ಮ್ಯಾಪಿಂಗ್ ಮಾಡಲು  ಕಂಪ್ಯೂಟರ್ ಅಥವ ಸ್ಮಾರ್ಟ್ ಫೋನ್ ಗಳಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸದೆ ಅಂಗನವಾಡಿ ಶಿಕ್ಷಕಿಯರು ತೀವ್ರ ಒತ್ತಡವನ್ನು ಅನುಭವಿಸುವಂತಾಗಿದೆ.

ಮಹಿಳೆಯರು,ರೋಗಿಗಳು ಸಣ್ಣ ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ಮ್ಯಾಪಿಂಗ್ ಗಾಗಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇದೆ.

ಇವು ಸರ್ಕಾರಗಳು ಜನತೆಯ ಮೇಲೆ ಎಸಗುವ ದೌರ್ಜನ್ಯವೇ ಆಗಿದೆ. ಎ.ಸಿ.ಕಛೇರಿಗಳಿಂದ  ಹೊರಬರುವ ಆದೇಶಗಳನ್ನು ಕೆಳ ಸ್ತರದಲ್ಲಿ ಅನುಷ್ಠಾನಗೊಳಿಸಲು  ಸಮರ್ಪಕ ವ್ಯವಸ್ಥೆಗಳಿಲ್ವದೆ ಸಾಮಾನ್ಯ ನಾಗರಿಕರು ಜೀವವನ್ನೇ ಪಣಕ್ಕಿಡುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿರುವುದು  ಆಡಳಿತ ವರ್ಗಗಳ ಹೊಣೆಗೇಡಿತನದ ಪರಿಣಾಮವಾಗಿದೆ.

ಪ್ರತಿಯೊಂದು ಸಂದರ್ಭದಲ್ಲೂ ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ಕೊರತೆ ಸಮಾಜದಲ್ಲಿ ಗಂಭೀರ ಚಿಂತನೆಗೆ ಒಳಪಡಿಸುವಂತೆ ಮಾಡುತ್ತಿದೆ. ನಿರಂತರವಾಗುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯ, ನ್ಯಾಯದ ನಿರಾಕರಣೆ, ಅಥವಾ ವಿಳಂಬ ನ್ಯಾಯ ಆಕೆಯನ್ನು ಮಾನಸಿಕವಾಗಿ ಕುಗ್ಗಿಸುವುದಲ್ಲದೆ , ಸ್ವಾವಲಂಬಿ ಬದುಕಿಗೆ ತಡೆಯುಂಟುಮಾಡುತ್ತಿದೆ.

ಮಹಿಳೆಯರು ಆಡಳಿತದ ಭಾಗವಾದಾಗ,  ಆಕೆಯ ಸಮಸ್ಯೆಗಳು ಸಮಾಜದಲ್ಲಿ ಚರ್ಚಾ ವಿಷಯವಾಗಿ ಮುನ್ನೆಲೆಗೆ ಬಂದು, ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ನೀತಿ ನಿರೂಪಣಾ ಸಮಿತಿಗಳಲ್ಲಿ ಮಹಿಳಾ ಮೀಸಲಾತಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಬೇಕಾಗಿದೆ.

ಈ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಂ ವೀಕ್ಷಕರಾಗಿ ಆಗಮಿಸಿದ್ದರು. ರಾಜ್ಯ ಕಾರ್ಯದರ್ಶಿ ಝುಲೈಖ, ರಾಜ್ಯ ಸಮಿತಿ ಸದಸ್ಯರಾದ ರಮ್ಲತ್, ಜಬೀನ ಮೈಸೂರು ಹಾಗೂ ನಾಝಿಯಾ ಉಡುಪಿ ಹಾಜರಿದ್ದರು. ವಿಶೇಷ ಆಹ್ವಾನಿತರಾಗಿ SDPI ರಾಜ್ಯ ಸಮಿತಿ ಸದಸ್ಯೆ ಮಿಸ್ರಿಯ ಕಣ್ಣೂರು ಹಾಜರಿದ್ದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿ ವರದಿ ಮಂಡಿಸಿದರು ಹಾಗೂ ರಾಜ್ಯ ಕೋಶಾಧಿಕಾರಿ ಆಯಿಷಾ ಬೆಂಗಳೂರು ಧನ್ಯವಾದಗೈದರು.