ಖಾರದ ಪುಡಿ ಎರಚಿ ಚಿನ್ನದ ಸರ ಸುಲಿಗೆ: ಓರ್ವ ಆರೋಪಿ ಬಂಧನ, ಚಿನ್ನದ ಸರ ವಶ



ಮಲ್ಪೆ: ಮಲ್ಪೆ ಬಂದರು ಸಮೀಪ ಖಾರದ ಪುಡಿ ಎರಚಿ ಮೀನು ವ್ಯಾಪಾರಿಗೆ ಹಲ್ಲೆ ಮಾಡಿ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣದಲ್ಲಿ ಮಲ್ಪೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ಸುಲಿಗೆ ಮಾಡಿದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ದಯಾನಂದ ಕುಂದರ್ ಎಂಬವರು ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಕೆಲಸ ಮಾಡಿಕೊಂಡಿದ್ದು,  ಶೌಚಾಲಯಕ್ಕೆ ಹೋಗಿ ವಾಪಸ್ಸು ಬಂದರು ಕಡೆಗೆ ಬರುತ್ತಿದ್ದಾಗ ಒಬ್ಬ ಆರೋಪಿಯು ಮೀನಿನ ಬಗ್ಗೆ ವಿಚಾರಿಸಿ, ಸುಲಿಗೆ ಮಾಡುವ ಉದ್ದೇಶದಿಂದ ದಯಾನಂದ ಕುಂದರ್ ಅವರ ಮುಖಕ್ಕೆ ಖಾರದ ಪುಡಿ ಎರಚಿ, ಸ್ವಲ್ಪ ದೂರ ಎಳೆದೊಯ್ದಿದ್ದಾನೆ. ಬಳಿಕ ಇನ್ನಿಬ್ಬರು ಆರೋಪಿಗಳು ಸೇರಿ, ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೊಡಲು ಒತ್ತಾಯಿಸಿದ್ದಾರೆ. ಕೊಡದಿದ್ದಾಗ ಮೂವರು ಸೇರಿ ಹಲ್ಲೆ ನಡೆಸಿ, ಅಂದಾಜು ₹6 ಲಕ್ಷ ಮೌಲ್ಯದ ಸುಮಾರು 6 ಪವನ್ (37.570 ಗ್ರಾಂ) ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಅಲ್ಲದೆ, ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಂದುಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ.

ಈ ಕುರಿತು ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2026, ಕಲಂ 309(6), 351(2) ಸಹಿತ 3(5) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು,  ಪ್ರಕರಣದ ಪ್ರಮುಖ ಆರೋಪಿ ಮುತ್ತಣ್ಣ (20) ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತನಿಂದ ಸುಲಿಗೆ ಮಾಡಿದ 37.570 ಗ್ರಾಂ ತೂಕದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.