ಉಡುಪಿ;ಬೀದಿನಾಯಿಗಳಿಗೆ ಆಶ್ರಯತಾಣ- ಮೂರು ಗ್ರಾಮಸ್ಥರ ವಿರೋಧ- ನಾಳೆ ಗ್ರಾಮಸ್ಥರ ಪ್ರತಿಭಟನೆ !

ಉಡುಪಿ: ಬೀದಿ ನಾಯಿಗಳ ಕುರಿತಂತೆ ಮಾನವೀಯ ದೃಷ್ಟಿಕೋನದಿಂದ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶವನ್ನು ನೀಡಿದ ಬಳಿಕ ಇದೀಗ ದೇಶಾದ್ಯಂತ ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಬೀದಿ ನಾಯಿಗಳು ಇದೀಗ ವಿವಾದದ ಕೇಂದ್ರ ಬಿಂದುವಾಗುತ್ತಿವೆ. ಇವುಗಳಿಗೆ ಸಂರಕ್ಷಿತ ಆಶ್ರಯ ತಾಣಗಳನ್ನು ನಿರ್ಮಿಸುವ ಗುರುತರ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.

ಉಡುಪಿ ಜಿಲ್ಲೆಯ ಮಟ್ಟಿಗೆ ಇದು ವಿವಾದಕ್ಕೆ ಎಡೆ ಮಾಡಿದ್ದು, ಉಡುಪಿ ಹೊರವಲಯದ ಉಪ್ಪೂರು ಬಳಿ ಜಿಲ್ಲಾಡಳಿತ ಇದಕ್ಕಾಗಿ ಗುರುತಿಸಿದ ಜಾಗದ ವಿರುದ್ಧ ಈಗ ಮೂರು ಗ್ರಾಮಗಳ ಜನತೆ ಒಂದಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಉಪ್ಪೂರು, ಹಾವಂಜೆ ಹಾಗೂ ಆರೂರಿನ ಗ್ರಾಮಸ್ಥರು ಜಿಲ್ಲಾಡಳಿತದ ಈ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ.

ಉಡುಪಿಯಲ್ಲಿ ಬೀದಿ ನಾಯಿಗಳ ಉಪಟಳ ಇಂದು ನಿನ್ನೆಯದಲ್ಲ. ಜಿಲ್ಲೆಯಲ್ಲಿ ಸುಮಾರು 18,000 ಬೀದಿನಾಯಿ ಗಳನ್ನು ಗುರುತಿಸಿರುವ ಜಿಲ್ಲಾಡಳಿತ ಹೊರವಲಯದ ಉಪ್ಪೂರು ಗ್ರಾಮದಲ್ಲಿ ಶೆಲ್ವರ್‌ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಈ ಗ್ರಾಮದ ಜನರು ನಮ್ಮೂರಿಗೆ ಬೀದಿನಾಯಿಗಳ ಶೆಲ್ಪರ್ ಬೇಡವೇ ಬೇಡ ಎಂದು ಪಟ್ಟು ಹಿಡಿದು ಕುಳಿತಿ ದ್ದಾರೆ. ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಇದೇ ಫೆ.6ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಮೂರು ಗ್ರಾಮಗಳ ಜನತೆ ಸಾಮೂಹಿಕ ನಿರ್ಧಾರ ಕೈಗೊಂಡಿದ್ದಾರೆ.