ಉಡುಪಿ:ಅಬಕಾರಿ ಸಚಿವ ತಿಮ್ಮಾಪುರ್ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ- ಪ್ರತಾಪಸಿಂಹ ನಾಯಕ್ ಆಗ್ರಹ



ಸುದ್ದಿಗೋಷ್ಠಿ

ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರಿಂದಲೇ ಮುಖ್ಯಮಂತ್ರಿ‌ ಹಾದಿಯಾಗಿ ಇಡೀ ಮಂತ್ರಿಮಂಡಲ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಬಕಾರಿ ಸಚಿವರ ರಕ್ಷಣೆಯಲ್ಲಿ ತೊಡಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆರೋಪಿಸಿದರು. 

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಅಬಕಾರಿ ಡಿಸಿಯ ಆಡಿಯೋದಲ್ಲಿ ಸಚಿವರಿಗೆ ಒಂದು ಕೋಟಿ ಲಂಚ ಕೊಡಬೇಕಿದೆ ಎಂಬುವುದು ಸ್ಪಷ್ಟವಾಗಿದೆ. ಸಚಿವರು ಸಾಕ್ಷಿ ಕೇಳುತ್ತಿದ್ದಾರೆ. ಆದರೆ ಭ್ರಷ್ಟಾಚಾರ ಮಾಡುವವರು ಸಾಕ್ಷಿ ಸೃಷ್ಟಿಸಿ ಭ್ರಷ್ಟಾಚಾರ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು. 

ರಾಜ್ಯ ಸರಕಾರಕ್ಕೆ ಭಂಡತನ‌ ಬಂದಿದೆ. ವಿಧಾನಸಭೆ ಹಾಗೂ‌ ವಿಧಾನ ಪರಿಷತ್ ನಲ್ಲಿ ನಾವು ಏನಾ ಮಾಡಿದರೂ ನಡೆಯುತ್ತದೆ ಎಂಬ ದುರ್ವತನೆ ತೋರುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ. ಅಧಿಕಾರಿಗಳ ಮೇಲೆ ದರ್ಪ ಮಿತಿಮೀರಿದ್ದು, ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಸರಕಾರದ ಅವ್ಯವಹಾರ, ಅನಾಚಾರ ಮೀತಿ‌ ಮೀರಿದ್ದು, ಜನರು‌ ಸರಕಾರವನ್ನು ಇಳಿಸಲು ಕಾಯುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಸುಳ್ಳು‌ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಗ್ಯಾರಂಟಿ ಯೋಜನೆ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಸೋತಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದರು.