ಉಡುಪಿ:ಶಾಸಕ ಗುರ್ಮೆ vs ಸೊರಕೆ ರಾಜಕೀಯ ಕಚ್ಚಾಟದ ಮಧ್ಯೆ ಉಡುಪಿ ಕಂಬಳದ ಶಂಕುಸ್ಥಾಪನೆ ! ನಿಷೇಧಾಜ್ಞೆ ಘೋಷಿಸಿದ್ದ ಜಿಲ್ಲಾಡಳಿತ



ಉಡುಪಿ: ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ಕಚ್ಚಾಟದ ಮಧ್ಯೆಯೇ ಉಡುಪಿ ಕಂಬಳದ ಶಂಕುಸ್ಥಾಪನೆ ಮಣಿಪಾಲ ಸಮೀಪದ 80 ಬಡಗುಬೆಟ್ಟುವಿನಲ್ಲಿರುವ ಕಂಬಳದ ಕರೆ ಇಂದು ನೆರವೇರಿತು‌. 

ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ ಶೆಟ್ಟಿ ನೇತೃತ್ವದಲ್ಲಿ ಉಭಯ ಜಿಲ್ಲೆಯ ಶಾಸಕರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ಹಾಗೂ ಕಂಬಳದ ಪೋಸ್ಟರ್ ಅನಾವರಣ ಸಮಾರಂಭ ನಡೆಯಿತು. 

ಶಂಕುಸ್ಥಾಪನೆ ನಡೆಸಲು ಕಾಂಗ್ರೆಸ್ ಮಾಜಿ ಸಚಿವ ವಿಜಯಕುಮಾರ್ ಸೊರಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾರ್ಚ್ 4ರಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ಮಾಡಬೇಕೆಂದು ಸೊರಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಹೇರಿತ್ತು. ಹಲವು ಗೊಂದಲ, ಜಿಲ್ಲಾಡಳಿತದ ಆದೇಶದ ಹೊರತಾಗಿಯೂ ಯಾವುದೇ ಸದ್ದು ಗದ್ದಲವಿಲ್ಲದೆ ಶಾಂತಿಯುತವಾಗಿ ಶಂಕುಸ್ಥಾಪನೆ ನಡೆಯಿತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಬಿಜೆಪಿ ಶಾಸಕರುಗಳು ,ಜಿಲ್ಲಾಡಳಿತ ಮಾರ್ಚ್ ನಾಲ್ಕರಂದು ಇಲ್ಲಿ ಶಂಕುಸ್ಥಾಪನೆ ಇಟ್ಟುಕೊಂಡಿದೆ.ಶಂಕುಸ್ಥಾಪನೆ ಮಾಡಿದರೆ ,ಸರಕಾರದ ವತಿಯಿಂದಲೇ ಕಂಬಳ ನಡೆಸುತ್ತೀರಾ? ಕಾಪು ಶಾಸಕರು ದಾನಿಗಳ ನೆರವಿನಿಂದ ಕಂಬಳ ಮಾಡಲು ಹೊರಟಿದ್ದಾರೆ.ಆದರೆ ಸರಕಾರ ಎಷ್ಟು ಅನುದಾನ ಕಂಬಳಕ್ಕೆ ನೀಡುತ್ತದೆ? ಯಾವ ಕಂಬಳಕ್ಕೂ ಸರಕಾರ ಅನುದಾನ ನೀಡುತ್ತಿಲ್ಲ.ನೀಡಿದರೂ ಎರಡರಿಂದ ಐದು ಲಕ್ಷ ಮಾತ್ರ.ಒಂದು ಕಂಬಳ ಆಯೋಜುಸಲು ಕೋಟಿಗೂ ಹೆಚ್ಚು ಹಣ ಬೇಕು.ಇಂತಹ ಉತ್ತಮ ಕಾರ್ಯಕ್ರಮದಂದು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ.ಯಾಕೆ?  ಪೊಲೀಸರಿಗೂ ಕಷ್ಟ.ಅಧಿಕಾರಿಗಳಿಗೂ ಉಭಯ ಸಂಕಟದ ಸ್ಥಿತಿ ಎದುರಾಗಿದೆ.ನಾವು ಉಡುಪಿ ಮತ್ತು ದಕ್ಷಿಣ ಕನ್ನಡದ ಬಿಜೆಪಿ ಶಾಸಕರು ಇಲ್ಲಿ ಸೇರಿದ್ದೇವೆ.ಇದೊಂದು ಉತ್ತಮ ಕಾರ್ಯ.ಸಾಧ್ಯವಾದರೆ ಬೆಂಬಲ ಸಹಕಾರ ನೀಡಿ ಎಂದು ಹೇಳಿದರು.