ಗದಗ:ಬಿಜೆಪಿ ಶಾಸಕ ಲೋಕಾ ಬಲೆಗೆ : 5 ಲಕ್ಷ ರೂ ಲಂಚ ಪಡೆಯುವಾಗ ಬಲೆಗೆ ಕೆಡವಿದ ಲೋಕಾಯುಕ್ತ ಪೊಲೀಸರು


ಗದಗ ಜಿಲ್ಲೆಯ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ


5 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಕ್ಷ್ಮೇಶ್ವರದಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾಗ ಶಾಸಕ ಮತ್ತು ಇಬ್ಬರು ಪಿಎಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಕ್ಲಾಸ್ 1 ಗುತ್ತಿಗೆದಾರ ವಿಜಯ್​ಗೆ ಲಂಚ ನೀಡಲು ಒತ್ತಾಯಿಸಲಾಗಿದೆ. ರಸ್ತೆ ಬದಿ ತಡೆಗೋಡೆ ನಿರ್ಮಾಣದ ಕಾಮಗಾರಿ ವಹಿಸಲು 11 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಡಲಾಗಿದೆ. ಆದರೆ 5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಶಾಸಕ ಚಂದ್ರು ಮತ್ತು ಇಬ್ಬರು ಪಿಎಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಚಂದ್ರು ಲಮಾಣಿಗೆ ಸೇರಿದ ಬಾಲಾಜಿ ಆಸ್ಪತ್ರೆ ಮೇಲೂ ಲೋಕಾಯುಕ್ತ ದಾಳಿ ಮಾಡಿ ಪರಿಶೀಲನೆ ಮಾಡಿದೆ. ಲೋಕಾಯುಕ್ತ ಎಸ್​ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.

ಇದು ಗುತ್ತಿಗೆದಾರರ ಹೋರಾಟಕ್ಕೆ ಸಿಕ್ಕಿರುವ ಜಯ: ಮಂಜುನಾಥ್

ಸದ್ಯ ಈ ವಿಚಾರವಾಗಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್​ ಹೇಳಿಕೆ ನೀಡಿದ್ದು, ಶಾಸಕರೇ ಈ ರೀತಿಯ ಕೆಲಸಕ್ಕೆ ಇಳಿಯಬಾರದು. ನಾವು ಮಾಡುತ್ತಿದ್ದ ಕಮಿಷನ್​ ಆರೋಪಕ್ಕೆ ಸಾಕ್ಷಿ ಸಿಕ್ಕಂತೆ ಆಗಿದೆ. ಇದು ಗುತ್ತಿಗೆದಾರರ ಹೋರಾಟಕ್ಕೆ ಸಿಕ್ಕಿರುವ ಜಯ. ದೂರುದಾರ ಗುತ್ತಿಗೆದಾರನ ಬೆಂಬಲಕ್ಕೆ ನಮ್ಮ ಸಂಘ ಇರಲಿದೆ ಎಂದು ಹೇಳಿದ್ದಾರೆ.

ನನ್ನ ಗಮನಕ್ಕೆ ಬಂದಿಲ್ಲ: ಛಲವಾದಿ ನಾರಾಯಣಸ್ವಾಮಿ

ವಿಧಾನಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಪಕ್ಷ ಎಂದೂ ಸಹ ಲಂಚ ಸ್ವೀಕಾರ ಮಾಡಿ ಅಂತ ಹೇಳಿಲ್ಲ. ಇದರ ಹಿಂದೆ ಸತ್ಯಾಸತ್ಯತೆ ಏನಿದೆ ಅಂತಾ ಪರಿಶೀಲನೆ ಮಾಡಬೇಕಿದೆ ಎಂದಿದ್ದಾರೆ.