ಮಣಿಪಾಲ: ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 145/2025 ರ ಎನ್‌ಡಿಪಿಎಸ್ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.16/08/2025 ರಂದು ಸಂಜೆ 5:15ರ ಸುಮಾರಿಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರ ನಗರ ನರಸಿಂಗೆ ದೇವಸ್ಥಾನ ರಸ್ತೆದಲ್ಲಿರುವ ಮಣಿಪಾಲ ಆಟೋ ಬಾರ್ ಬಿಲ್ಡಿಂಗ್‌ನ ಮೊದಲ ಮಹಡಿಯ ರೂಂ ನಂ.3ರಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ದಾಳಿಯ ವೇಳೆ ಆಫ್ಶಿನ್ ಮತ್ತು ಶಿವನಿಧಿ ಆಚಾರ್ಯ ಎಂಬ ಇಬ್ಬರು ಆರೋಪಿಗಳು ಗಾಂಜಾ ಹಾಗೂ ಎಲ್‌ಎಸ್‌ಡಿ ಮಾದಕ ವಸ್ತುಗಳನ್ನು ಹೊಂದಿರುವುದು ಪತ್ತೆಯಾಯಿತು. ಪರಿಶೀಲನೆ ನಡೆಸಿದಾಗ ಆಫ್ಶಿನ್ ಬಳಿ 1111 ಗ್ರಾಂ ಗಾಂಜಾ ಮತ್ತು ಶಿವನಿಧಿ ಆಚಾರ್ಯನ ಬಳಿ 126 ಗ್ರಾಂ ಗಾಂಜಾ, 0.038 ಗ್ರಾಂ ತೂಕದ ಎಲ್‌ಎಸ್‌ಡಿ ಸ್ಲಿಪ್‌ಗಳು, 10 ಖಾಲಿ ಸಣ್ಣ ಪ್ಲಾಸ್ಟಿಕ್ ಕವರ್‌ಗಳು ಹಾಗೂ ಡಿಜಿಟಲ್ ತೂಕ ಯಂತ್ರ ಪತ್ತೆಯಾಯಿತು. ಸುಮಾರು ₹50,000 ಮೌಲ್ಯದ ಮಾದಕ ವಸ್ತುಗಳೊಂದಿಗೆ ₹2,000 ನಗದು ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮನೀಶ್ (34)ನನ್ನು 17/08/2025ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿ ಮೊಹಮ್ಮದ್ ಅಜ್ಮಲ್ (26), ಮಲ್ಲಪುರಂ ಜಿಲ್ಲೆಯ ನಿವಾಸಿ, ಪ್ರಸ್ತುತ ಮಣಿಪಾಲ ನಿವಾಸಿಯನ್ನು ಮಣಿಪಾಲ ಸಿಂಡಿಕೇಟ್ ಸರ್ಕಲ್ ಸಮೀಪದ ಮಾಕ್ಸ್ ಶೋರೂಂ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಬಂಧಿಸಲಾಗಿದೆ. ಆತನ ವಶದಲ್ಲಿದ್ದ ಸುಮಾರು 2084 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹1 ಲಕ್ಷ) ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇನ್ನು, ಗಾಂಜಾ ಸರಬರಾಜು ಮಾಡಿಸಿಕೊಂಡಿದ್ದ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಅವರ ವಿರುದ್ಧವೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
