ಕಾರ್ಕಳ: ಜಿಲ್ಲಾಧಿಕಾರಿ ಸೂಚನೆಯಂತೆ ನಿರ್ಮಿತಿ ಕೇಂದ್ರ ಪರಶುರಾಮ ಥೀಮ್ ಪಾರ್ಕ್ ಪರಿಸರದ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದೆ. ಸಾರ್ವಜನಿಕರಿಗೆ ಅವಕಾಶ ನೀಡದೇ ಇಲಾಖೆಯ ಮೂಲಕವೇ ಇದನ್ನು ನಡೆಸಲು ತೀರ್ಮಾನಿಸಲಾಗಿದೆ.
ಈಗಾಗಲೇ ಸ್ವಚ್ಛತಾ ಸಿಬ್ಬಂದಿಗಳು ಬೆಟ್ಟದ ಬುಡದಿಂದ ತುದಿಯಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ವರೆಗಿನ ಸಂಪರ್ಕ ರಸ್ತೆಯ ಆಸುಪಾಸಿನಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಹುಲ್ಲು, ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಪರಶುರಾಮ ಮೂರ್ತಿಯ ವಿವಾದದ ಕುರಿತು ಈಗಾಗಲೇ ಹೈಕೋರ್ಟ್ ನಲ್ಲಿ ಹಾಗೂ ಸಿಐಡಿಯಿಂದ ತನಿಖೆ ನಡೆಯುತ್ತಿರುವುದರಿಂದ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಜನಪ್ರತಿನಿಧಿಗಳ ಕೋರಿಕೆಗೆ ಹಸಿರು ನಿಶಾನೆ ದೊರೆಯುವ ಸಾದ್ಯತೆ ಇಲ್ಲ ಎನ್ನಲಾಗಿದೆ.
ಕಳೆದ ಜ.4ರಂದು ಥೀಮ್‌ಪಾರ್ಕ್ ತಾಮ್ರದ ಹೊದಿಕೆಯ ಕೆಲವು ಶೀಟುಗಳು ಕಳ್ಳತನವಾಗಿರುವ ವಿಷಯವನ್ನು ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಅವರು ಬಹಿರಂಗಪಡಿಸಿದ ಬಳಿಕ ಬೂದಿಮುಚ್ಚಿದ ಕೆಂಡದಂತಿದ್ದ ಈ ವಿವಾದ ಮತ್ತೊಮ್ಮೆ ಸ್ಪೋಟಗೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿಗೆ ಕಾರಣವಾಗಿತ್ತು.


