ಜ.28 ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿಶೇಷ ಶಿಕ್ಷಕರ ಮುಷ್ಕರ !

ಸುದ್ದಿಗೋಷ್ಠಿ

ಉಡುಪಿ: ರಾಜ್ಯ ಸರಕಾರ ನೀಡುತ್ತಿರುವ ಜುಜುಬಿ ಅನುದಾನವೂ ಕಳೆದ ಆರು ತಿಂಗಳಿನಿಂದ ಸಿಗದೆ ಸಂಕಷ್ಟಕ್ಕೀಡಾದ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ತಮ್ಮ ಹಕ್ಕು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜ. 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷೆ ಡಾ. ಕಾಂತಿ ಹರೀಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಆರು ತಿಂಗಳಿನಿಂದ ಶಾಲೆಗಳಿಗೆ ಅನುದಾನ ಬಾರದೆ ಸಂಕಷ್ಟ ಸ್ಥಿತಿ ಎದುರಾಗಿದೆ ಎಂದರು.

ಸರಕಾರದ ಅನುದಾನ ಪಡೆವ 180 ವಿಶೇಷ ಶಾಲೆಗಳು ರಾಜ್ಯದಲ್ಲಿದ್ದು 2007ರಿಂದ ಶಿಕ್ಷಕರು ಹಾಗೂ ಶಿಕ್ಷಕೇತರರಿಗೆ ಸೇವಾ ಭದ್ರತೆ ನಿಟ್ಟಿನಲ್ಲಿ ಮುಂದಿಟ್ಟ ಬೇಡಿಕೆ ಈಡೇರಿಲ್ಲ. ಅನುದಾನ ನೀಡಲು ದ್ವಂದ್ವ ನೀತಿ ಅನುಸರಣೆಯಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಕನ್ನಡಿಯ ಗಂಟಾಗಿದೆ.

ಶಿಶು ಕೇಂದ್ರಿತ ವ್ಯವಸ್ಥೆಯಡಿ ಅನುದಾನ ಪಡೆವ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ 1987ರಲ್ಲಿ ಜಾರಿಗೆ ತಂದ ಅನುದಾನ ನೀತಿ ಅನ್ವಯಿಸಬೇಕು.ವಿಶೇಷ ಶಾಲೆಗಳ ಅನುದಾನ ಶೇ. 40 ಏರಿಕೆಯ ಪ್ರಸ್ತಾವನೆಗೆ ಸರಕಾರ ಕೂಡಲೇ ಮಂಜೂರಾತಿ ನೀಡಬೇಕು.

ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದಂತೆ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಒದಗಿಸಬೇಕು.ಶಿಶು ಕೇಂದ್ರಿತ ಸಹಾಯಧನ ಯೋಜನೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರವನ್ನು ಐದು ವರ್ಷಕ್ಕೊಮ್ಮೆ ಪರಿಷ್ಕರಿಸಬೇಕು.ವಿಶೇಷ ಶಾಲೆಗಳಿಗೆ ನೀಡುವ ಇಲಾಖಾ ಅನುದಾನವನ್ನು ಎರಡು ಕಂತುಗಳಲ್ಲಿ ಕ್ಲಪ್ತ ಕಾಲದಲ್ಲಿ  ಒದಗಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷ ರವೀಂದ್ರ ಎಚ್., ಸಂಘದ ಗೌರವಾಧ್ಯಕ್ಷೆ ಆಗ್ನೆಸ್ ಕುಂದರ್, ಶಶಿಕಲಾ ಕೋಟ್ಯಾನ್, ಯೂನಿಸ್, ದಿಲ್‌ದಾರ್ ಫಝಲುರ್ ರೆಹಮಾನ್ , ಕೌಸರ್ ಉಪಸ್ಥಿತರಿದ್ದರು.