ಜ.26ರಿಂದ 28ರವರೆಗೆ ಸಾಲುಮರದ ತಿಮ್ಮಕ್ಕ ವಿಷಯಾಧಾರಿತ 'ಫಲಪುಷ್ಪ ಪ್ರದರ್ಶನ-2026'



ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ

ಉಡುಪಿ: ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಸಾಲುಮರದ ತಿಮ್ಮಕ್ಕ ವಿಷಯಾಧಾರಿತ 'ಫಲಪುಷ್ಪ ಪ್ರದರ್ಶನ-2026' ಅನ್ನು ಇದೇ ಜ.26ರಿಂದ 28ರವರೆಗೆ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಡಿಸಿ, ಜ.26ರಂದು ಬೆಳಿಗ್ಗೆ 8ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಸುಮಾರು 7000 ಸಂಖ್ಯೆಯ 26 ಜಾತಿಯ ಹೂವಿನ ಗಿಡಗಳಾದ ಪೆಟೂನಿಯ, ಸೆಲೋಷಿಯಾ, ಸಾಲಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಅಸ್ಟರ್, ಬಾಲ್ಬಮ್, ತೊರೇನಿಯ, ಗುಲಾಬಿ, ಟೆಕೋಮಾ, ದಾಸವಾಳ, ಪ್ಯಾನ್ಸಿ, ಇಂಪೇಷಿಯನ್ಸ್ ಹಾಗೂ ಮುಂತಾದ ಗಿಡಗಳನ್ನು ಜೋಡಿಸಲಾಗುವುದು. ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಸಾಲುಮರದ ತಿಮ್ಮಕ್ಕನವರ ಜೀವನ ಮತ್ತು ಸಾಧನೆಗಳ ಬಗ್ಗೆ ಕಲಾ ಕೃತಿಗಳ ಪ್ರದರ್ಶನ. ಗುಲಾಬಿ, ಸೇವಂತಿಗೆ ಹಾಗೂ ಮುಂತಾದ ಹೂವುಗಳನ್ನು ಬಳಸಿ ತಯಾರಿಸಿದ ವಿವಿಧ ಕಲಾಕೃತಿಗಳ ಹಾಗೂ ತೆಂಗಿನ ಗರಿಗಳಿಂದ ತಯಾರಿಸಿದ ಜಾನೂರ್ ಆರ್ಟ್ ಕಲಾಕೃತಿಗಳ ಪ್ರದರ್ಶನ. ಸೆಲ್ಫಿ ಝೋನ್, Doreman and Mushroom, Cone ಮಾದರಿಗಳ ಪ್ರದರ್ಶನ ಇರಲಿದೆ. ಹಾಗೆಯೇ ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಹೂವಿನ ಕುಂಡಗಳ ಜೋಡಣೆ ಏರ್ಪಡಿಸಲಾಗುವುದು. ವಿವಿಧ ತರಕಾರಿಗಳ ಮಾದರಿ ಕೈತೋಟ ಹಾಗೂ Micro-greens ಬಗ್ಗೆ ಪ್ರಾತ್ಯಕ್ಷತೆ ನಡೆಯಲಿದೆ ಎಂದು ತಿಳಿಸಿದರು.

ಕೃಷಿಗೆ ಸಂಬಂಧಿಸಿದ ಇಲಾಖೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಯನ್ನು ತೆರೆಯಲಾಗುವುದು. ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬೆಳಿಗ್ಗೆ 10 ರಿಂದ ಸಂಜೆ 8 ಗಂಟೆಯವರೆಗೆ ಅವಕಾಶ-ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ‌ ನಿರ್ದೇಶಕಿ ಕ್ಷಮಾ ಪಾಟೀಲ್ ಇದ್ದರು.