ಉಡುಪಿ:ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ: 71 ಲಕ್ಷ ಕಳೆದುಕೊಂಡ ವ್ಯಕ್ತಿ !

ಸಾಂದರ್ಭಿಕ ಚಿತ್ರ

ಉಡುಪಿ: ಷೇರು ಮಾರುಕಟ್ಟೆ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಸಿಂಗಾಪುರದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿರುವ ಪಾಂಗಾಳದ ಮಹೇಶ ಶೆಟ್ಟಿಗಾರ್ ಅವರು ವಂಚನೆಗೆ ಒಳಗಾದವರು.

ಜ. 3ರಂದು ಆಮ್ಮಿ ಫೆಕ್ಸ್ ಪ್ರೋ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಮೂಲಕ ಅವರಿಗೆ ವ್ಯಕ್ತಿಯೊಬ್ಬ ಸಂದೇಶ ಕಳುಹಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾನೆ. ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ಕೊಡಿಸುವುದಾಗಿ ನಂಬಿಸಿದ್ದಾನೆ. ಅದರಂತೆ ಮಹೇಶ ಶೆಟ್ಟಿಗಾರ್ ಆರೋಪಿಯ ವಿವಿಧ ಬ್ಯಾಂಕ್ ಖಾತೆಗಳಿಗೆ ಜ. 4ರಿಂದ 18ರ ವರೆಗೆ ಒಟ್ಟು 71,74,000 ರೂ.ಗಳನ್ನು ವರ್ಗಾಯಿಸಿದ್ದರು. ಬಳಿಕ ವಂಚನೆಯ ಅರಿವಾಗಿ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.