ಉಡುಪಿ: ಜಿಲ್ಲಾ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ರಜತ ಸಂಭ್ರಮ, ನೂತನ ವರ್ಷ 2026 ಡೈರಿ ಬಿಡುಗಡೆ: ಸನ್ಮಾನ-ಪ್ರತಿಭಾ ಪುರಸ್ಕಾರ



ಉಡುಪಿ ಜಿಲ್ಲಾ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ರಜತ ಸಂಭ್ರಮ, ನೂತನ ವರ್ಷ 2026 ಡೈರಿ ಬಿಡುಗಡೆ, ನಿವೃತ್ತ ಉಪ ವಲಯ ಅರಣ್ಯ ಅಧಿಕಾರಿಗಳಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭ ಭಾನುವಾರ ಕಿದಿಯೂರು ಹೋಟೆಲಿನ ಶೇಷಶಯನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಎಲ್ಲೂರು ಅದಾನಿ ಪವರ್‌ನ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಉದ್ಘಾಟಿಸಿ ಮಾತನಾಡಿ,ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶಗಳು, ಸಮುದ್ರ ಕಿನಾರೆ, ಇಲ್ಲಿ ದೇವಳ ಹಾಗೂ ದೈವಸ್ಥಾನಗಳು ಸೇರಿದಂತೆ ಪ್ರಕೃತಿದತ್ತವಾಗಿ ಶ್ರೀಮಂತವಾಗಿದೆ. ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಹಾಗೂ ಸಿಬಂದಿಗಳ ಕರ್ತವ್ಯ ನಿಷ್ಠೆ ಪ್ರಶಂಸನೀಯ. ಬಹಳಷ್ಟು ಮಂದಿ ಅರಣ್ಯ ರಕ್ಷಣೆಗಾಗಿ ಹುತಾತ್ಮರಾಗಿದ್ದಾರೆ. ಅವರ ಕೊಡುಗೆಯನ್ನು ನಾವು ಮರೆಯುವ ಹಾಗಿಲ್ಲ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯ ವಿರುದ್ಧ ಜನಾಕ್ರೋಶವಿದೆ.ತಾನು ಸಚಿವನಾಗಿದ್ದ ಸಂದರ್ಭದಲ್ಲಿ ಸುಮಾರು 16 ಕಡೆಗಳಲ್ಲಿ ಸಾರ್ವಜನಿಕ ಸಭೆ ನಡೆಸಿ, ಜನರ ಅಹವಾಲುಗಳನ್ನು ಪಡೆದುಕೊಳ್ಳಲಾಗಿತ್ತು. ಪ್ರಸ್ತುತ ಬದಲಾಗುತ್ತಿರುವ ಹವಾಮಾನ ವೈಪರೀತ್ಯದಿಂದಾಗಿ ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು ಎಂಬ ಆಗ್ರಹವೂ ಇದೆ. ಇದರ ಮಧ್ಯೆಯೆ ಅರಣ್ಯ ಇಲಾಖೆ ಕಾರ್ಯನಿರ್ವಹಿಸಬೇಕಾದ ಸವಾಲಿದೆ ಎಂದರು.

ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಅಭಿವೃದ್ಧಿ ಹಾಗೂ ಅರಣ್ಯ ಸಂರಕ್ಷಣೆ ಎರಡೂ ಸಮತೋಲನವಾಗಿ ಸಾಗುವ ಆವಶ್ಯಕತೆಯಿದೆ. ಒಂದೆಡೆ ಸುಪ್ರೀಂ ಕೋರ್ಟಿನ ಆದೇಶದ ಪಾಲನೆ ಹಾಗೂ ಅರಣ್ಯ ಕಾಯ್ದೆಗಳ ಅನುಷ್ಠಾನದ ಮಧ್ಯೆ ಅರಣ್ಯ ಇಲಾಖೆ ಮಾನವೀಯತೆಗೆ ಹೆಚ್ಚು ಒತ್ತು ನೀಡಿ ಕಾರ್ಯ ನಿರ್ವಹಿಸಬೇಕು. ಇಲಾಖೆ ಹಾಗೂ ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆ ಅನಿವಾರ್ಯ. ಒಟ್ಟಾರೆ ಅರಣ್ಯಾಧಿಕಾರಿಗಳ ಪರಿಸ್ಥಿತಿ ತಂತಿಯ ಮೇಲೆ ನಡಿಗೆ ಎಂಬಂತಾಗಿದೆ ಎಂದರು.

ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಕಾರಿ ಗಣಪತಿ ಕೆ. ಮಾತನಾಡಿ, ಹಿಂದೆ ಅರಣ್ಯ ಇಲಾಖೆ ಜನರಿಂದ ದೂರವಿತ್ತು. ಆದರೆ ಇಂದು ಜನಸ್ನೇಹಿಯಾಗಿ ಕಾರ್ಯಾಚರಿಸುತ್ತಿದೆ. ಇಲಾಖೆ ಮತ್ತು ಜನರ ಮಧ್ಯೆ ಸಕರಾತ್ಮಕ ಬದಲಾವಣೆಯಾಗಿದೆ. ಪಶ್ಚಿಮ ಘಟ್ಟ ಹಾಗೂ ಸಮುದ್ರದ ಮಧ್ಯೆ ಸುಮಾರು 25 ಕಿ.ಮೀ.ಅಗಲದ ಈ ಕರಾವಳಿ ಭೂಭಾಗ ಹೆಚ್ಚುತ್ತಿರುವ ಜನಸಂಖ್ಯೆ, ಅಭಿವೃದ್ಧಿಯ ಜೊತೆಗೆ ಅರಣ್ಯ, ವನ್ಯ ಜೀವಿ ಸಂರಕ್ಷಣೆಯ ಮಹತ್ತರ ಕಾರ್ಯ ಇಲಾಖೆ ಮೇಲಿದೆ. ಈ ನಿಟ್ಟಿನಲ್ಲಿ ಇಲಾಖೆಗೆ ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ. ಆಧುನಿಕತೆಯ ತಂತ್ರಜ್ಞಾನಕ್ಕೆ ಸ್ಪಂದಿಸುವ ಒತ್ತಡ ಇಲಾಖೆಯ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ ಬಾಬು ಎಂ., ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಕಾರಿ ರವೀಂದ್ರ ಕುಮಾರ್ ಡಿ.ಎನ್., ಸಹಾಯಕ ಅರಣ್ಯ ಸಂರಕ್ಷಣಾಕಾರಿಗಳಾದ ಪಿ. ಶ್ರೀಧರ್ ಮೂಡಬಿದ್ರೆ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ್ ಪೂಜಾರಿ, ಎನ್. ಸತೀಶ್, ಜಿ.ಡಿ.ದಿನೇಶ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಸಂಸದರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಕಾರಿಗಳ ಸಂಘ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಜಿಲ್ಲಾ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಕೇಶವ ಪೂಜಾರಿ ಎಂ. ಸಂಘದ ಉಪಾಧ್ಯಕ್ಷರುಗಳಾದ ಕರುಣಾಕರ ಜೆ.ಆಚಾರ್ಯ, ಪ್ರಧಾನ ಕಾರ್ಯದರ್ಶಿ ರವಿ, ಜೊತೆ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಗೋವಿಂದ ಎಂ.ಪಟಗಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪವಲಯ ಅರಣ್ಯಾಧಿಕಾರಿಗಳಿಗೆ ಸನ್ಮಾನ ಹಾಗೂ ಪರಿಸರ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಗೌರವಾರ್ಪಣೆ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ರಕ್ತದಾನಿಗಳಿಗೆ ಗೌರವಾರ್ಪಣೆ ನಡೆಯಿತು.

ದಾಮೋದರ ಶರ್ಮ ಹಾಗೂ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷ ನಾಗೇಶ ಬಿಲ್ಲವ ಸ್ವಾಗತಿಸಿದರು.