![]() |
| ಚಪ್ಪಲಿಯಿಂದ ಹಲ್ಲೆ |
ದೆಹಲಿ: ಬಿ.ಆರ್. ಗವಾಯಿ ಅವರು ಸುಪ್ರೀಂ ಕೋರ್ಟ್‌ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿದ್ದಾಗ ರಾಕೇಶ್ ಕಿಶೋರ್ ಎನ್ನುವ ವಕೀಲ, ಕೋರ್ಟ್ ಹಾಲ್‌ನಲ್ಲೇ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ. ಇಂದು ವಕೀಲ ರಾಕೇಶ್ ಕಿಶೋರ್ ಮೇಲೆ ದೆಹಲಿಯ ಕರ್ಕರ್ದೂಮ ನ್ಯಾಯಾಲಯದ ಆವರಣದಲ್ಲಿ ಕೆಲವರು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.
ರಾಕೇಶ್ ಮೇಲೆ ಕೆಲವರು ಚಪ್ಪಲಿಯಿಂದ ಹಲ್ಲೆ ಮಾಡುತ್ತಿರುವ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹಲ್ಲೆ ನಡೆಯುವ ವೇಳೆ ರಾಕೇಶ್ ಕಿಶೋರ್ ಸಹ ಪ್ರತಿರೋಧ ತೋರಿ ವಾಪಸ್ ಹಲ್ಲೆ ಮಾಡಲು ಮುಂದಾಗುತ್ತಿರುವುದು ವಿಡಿಯೊದಲ್ಲಿ ಕಾಣುತ್ತದೆ. ರಾಕೇಶ್ ಕಿಶೋರ್ ಮೇಲೆ ಹಲ್ಲೆ ಮಾಡಿದವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.ನ್ಯಾ. ಬಿ.ಆರ್. ಗವಾಯಿ ಅವರತ್ತ ಸುಪ್ರೀಂ ಕೋರ್ಟ್‌ನಲ್ಲೇ ಕಳೆದ ಅಕ್ಟೋಬರ್ 6ರಂದು ವಕೀಲ ರಾಕೇಶ್ ಶೂ ಎಸೆಯಲು ಮುಂದಾಗಿದ್ದರು. ಸ್ಥಳದಲ್ಲಿದ್ದ ವಕೀಲರು ಆತನನ್ನು ತಡೆದಿದ್ದರು.
ಸಿಜೆಐ ನೇತೃತ್ವದ ಪೀಠದ ಎದುರು ವಕೀಲರು ಪ್ರಕರಣಗಳ ಕುರಿತು ಪ್ರಸ್ತಾಪಿಸುತ್ತಿದ್ದಾಗ ಘಟನೆ ನಡೆದಿತ್ತು. ಆದಾಗ್ಯೂ, ಇದರಿಂದ ಕುಗ್ಗದ ಗವಾಯಿ ಅವರು, ಪ್ರಸ್ತಾವನೆಗಳನ್ನು ಮುಂದುವರಿಸುವಂತೆ ವಕೀಲರಿಗೆ ಸೂಚಿಸಿದ್ದರು. ಈ ಘಟನೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತು.
'ಇದಕ್ಕೆಲ್ಲ ವಿಚಲಿತರಾಗದಿರಿ. ನಾನೂ ವಿಚಲಿತಗೊಳ್ಳುವುದಿಲ್ಲ. ಇಂತಹ ವಿಚಾರಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ಅಂದೇ ಗವಾಯಿ ಅವರು ಹೇಳಿ, ಆರೋಪಿ ರಾಕೇಶ್‌ನನ್ನು ಬಿಟ್ಟು ಬಿಡಿ ಎಂದು ಉದಾರತೆ ತೋರಿದ್ದರು.
ಆದರೆ, ತನ್ನ ತಪ್ಪಿಗೆ ಕ್ಷಮೆಯೂ ಕೇಳದ ರಾಕೇಶ್ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಆತನ ವಿರುದ್ಧ ಪ್ರಕರಣ ದಾಖಲಿಸಲು ಸಿಜೆಐ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.
