![]() |
| ಸುದ್ದಿಗೋಷ್ಠಿ |
ಉಡುಪಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರಕಾರ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಸಮಾಜಕ್ಕೆ ತೀವ್ರ ರೀತಿಯ ಕಿರುಕುಳ ಕೊಡುತ್ತ ಬಂದಿದೆ. ಅದರ ಮುಂದುವರಿದ ಭಾಗವಾಗಿ ಇದೇ ತಿಂಗಳ 8ನೇ ತಾರೀಕಿಗೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಹಿಂದೂ ಸಮಾಜಕ್ಕೆ ಅತ್ಯಂತ ಪೂಜನೀಯವಾದ ಗೋವಂಶವನ್ನು ಹಿಂಸಾತ್ಮಕವಾಗಿ ಕಳ್ಳಸಾಗಾಟ ಮಾಡುವಾಗ ಪೊಲೀಸರು ವಶಪಡಿಸಿದ ಸಾಗಾಟ ವಾಹನಗಳನ್ನು ಸುಲಭದಲ್ಲಿ ಹಿಂತಿರುಗಿಸುವಂತೆ ಮಾಡಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ಯನ್ನು ಸಡಿಲುಗೊಳಿಸಿ ತಿದ್ದುಪಡಿ ತರಲು ಕ್ಯಾಬಿನೆಟ್ ಸಭೆಯಲ್ಲಿ ಪಾಸ್ ಮಾಡಿದೆ. ಗೋವುಗಳಿಗೆ ಹಿಂಸೆ ಹೆಚ್ಚಾಗುವ ಸಾಧ್ಯತೆ ಇರುವ ಈ ತಿದ್ದುಪಡಿಯನ್ನು ವಿಶ್ವ ಹಿಂದೂ ಪರಿಷತ್ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು ತಿದ್ದುಪಡಿಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಕರ್ನಾಟಕ ದಕ್ಷಿಣ ಪ್ರಾಂತ್ಯದ ಗೋ ರಕ್ಷಾ ಪ್ರಮುಖರಾದ ಸುನೀಲ್ ಕೆ.ಆರ್ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಯಿದೆಯ ಸೆಕ್ಷನ್ 8ರ ಪ್ರಕಾರ ಪ್ರಸ್ತುತ ಅಕ್ರಮ ಗೋಸಾಗಾಟದ ವಾಹನವನ್ನು ಪೊಲೀಸರು ವಶಪಡಿಸಿದಾಗ ವಾಹನದ ಮೌಲ್ಯದಷ್ಟು ಬ್ಯಾಂಕ್ ಗ್ಯಾರಂಟಿಯನ್ನು ಕೊಟ್ಟೇ ತಾತ್ಕಾಲಿಕವಾಗಿ ಹಿಂಪಡೆಯಲು ಅವಕಾಶವಿದೆ. ಈಗ ವಶಪಡಿಸಿದ ವಾಹನದ ಮಾರುಕಟ್ಟೆ ಮೌಲ್ಯವು ರೂಪಾಯಿ 5 ಲಕ್ಷ ಇದ್ದರೆ ರೂಪಾಯಿ 5 ಲಕ್ಷದ ಬ್ಯಾಂಕ್ ಗ್ಯಾರಂಟಿಯನ್ನು ಪ್ರಸ್ತುತಪಡಿಸಿ ವಾಹನವನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲು ಅವಕಾಶವಿದೆ. ಪ್ರಕರಣದ ಅಪರಾಧ ಸಾಬೀತಾದಲ್ಲಿ ವಾಹನವನ್ನು ವಾಪನ್ ತಂದು ಸರಕಾರಕ್ಕೆ ಮುಟ್ಟುಗೋಲು ಹಾಕಬೇಕಾಗುತ್ತದೆ. ಇದಕ್ಕೆ ತಪ್ಪಿದಲ್ಲಿ ಬ್ಯಾಂಕ್ ಗ್ಯಾರಂಟಿಯ ಹಣವನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲಾಗುತ್ತದೆ. ಈಗ ಇರುವ ಕಾಯಿದೆ ಸಾಕಷ್ಟು ಪರಿಣಾಮಕಾರಿಯಾಗಿದ್ದು, ಬ್ಯಾಂಕ್ ಗ್ಯಾರಂಟಿ ತೆಗೆದುಕೊಳ್ಳುವ ಷರತ್ತಿನಿಂದಾಗಿ ಸಾಕಷ್ಟು ಅಕ್ರಮ ಗೋ ಸಾಗಾಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಸಾವಿರಾರು ಗೋವಂಶಗಳ ರಕ್ಷಣೆಗೆ ಕಾರಣವಾಗಿದೆ.
ಆದರೆ ಗೋ ಕಳ್ಳ ಸಾಗಾಟಗಾರರಿಗೆ ಬ್ಯಾಂಕ್ ಗ್ಯಾರಂಟಿಯನ್ನು ಕೊಡಲು ಕಷ್ಟವಾಗುತ್ತದೆ ಎಂಬ ಅಸಂಭದ್ದ ನೆಪ ಒಡ್ಡಿ ಅಂತಹ ಆರೋಪಿಗಳ ಮೇಲಿನ ಕನಿಕರದಿಂದ ಕಾಂಗ್ರೆಸ್ ಸರಕಾರವು ಈ ಸೆಕ್ಷನ್ ನಲ್ಲಿ ಇರುವ ಬ್ಯಾಂಕ್ ಗ್ಯಾರಂಟಿಯ ಷರತ್ತನ್ನು ಹಿಂಪಡೆದು ಕೇವಲ indemnity bond ಕೊಟ್ಟರೆ ಸಾಕೆಂದು ತಿದ್ದುಪಡಿ ತರುತ್ತಿದೆ. ಸರಕಾರಕ್ಕೆ ಗೋ ಕಳ್ಳ ಸಾಗಾಟಗಾರರ ಮೇಲೆ ಇಷ್ಟೊಂದು ಪ್ರೀತಿ ಯಾಕೆ ? ಇದು ಅಕ್ರಮ ಸಾಗಾಟಗಾರರಿಗೆ ಸರಕಾರವು “ಗೋಕಳ್ಳಸಾಗಣೆದಾರರೊಂದಿಗೆ ನಾವಿದ್ದೇವೆ” ಎಂದು ಪರೋಕ್ಷವಾಗಿ ಸಂದೇಶ ಕೊಡುವಂತಿದೆ.ಆದ್ದರಿಂದ ಈ ಹೊಸ ಮಸೂದೆಗೆ ನಮ್ಮ ವಿರೋಧವಿದೆ. ತಕ್ಷಣ ಇದನ್ನು ಹಿಂಪಡೆಯಬೇಕು. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ರಾಜ್ಯಾದ್ಯಾಂತ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
