ಢಾಕಾ: ಶೇಖ್ ಹಸೀನಾಗೆ ಮರಣದಂಡನೆ ! ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಿಂದ ತೀರ್ಪು

ಶೇಖ್ ಹಸೀನಾ


ಢಾಕಾ/ನವದೆಹಲಿ: 2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ಅಲ್ಲಿನ ಆಗಿನ ಪ್ರಧಾನಿ ಶೇಖ್‌ ಹಸೀನಾ ‘ಮಾನವೀಯತೆ ವಿರುದ್ಧ ಅಪರಾಧ ಎಸಗಿದ್ದಾರೆ’ ಎಂದು ತೀರ್ಮಾನಿಸಿರುವ ಬಾಂಗ್ಲಾದೇಶದಲ್ಲಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು,  ಹಸೀನಾ ಅವರಿಗೆ ಮರಣ ದಂಡನೆ ವಿಧಿಸಿದೆ.

ಮೀಸಲಾತಿ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಳೆದ ಜುಲೈನಲ್ಲಿ ದೇಶದಾದ್ಯಂತ ತೀವ್ರ ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನಕಾರರನ್ನು ನಿಯಂತ್ರಿಸಲು ಅವರ ಮೇಲೆ ಗುಂಡು ಹಾರಿಸಲು ಸೇನೆ ಮತ್ತು ಪೊಲೀಸರಿಗೆ ಹಸೀನಾ ಅವರು ಆದೇಶಿಸಿದ್ದರು.

ಆಗಸ್ಟ್‌ 5ರಂದು ಢಾಕಾದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಆರು ಮಂದಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಲು ಮತ್ತು ಅವರ ಹತ್ಯೆ ಮಾಡಲು ಆದೇಶ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಲಾಗಿದೆ.

ಪ್ರತಿಭಟನೆಯು ತೀವ್ರಗೊಳ್ಳುತ್ತಿದ್ದಂತೆ ಹಸೀನಾ ಸೇರಿದಂತೆ ಹಲವು ಹಿರಿಯ ಪೊಲೀಸ್‌ ಅಧಿಕಾರಿಗಳು ಆಗಸ್ಟ್‌ನಲ್ಲಿಯೇ ಬಾಂಗ್ಲಾವನ್ನು ತೊರೆದಿದ್ದರು. ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಹಸೀನಾ ಅವರು ಪಲಾಯನ ಮಾಡಿದ ಬಳಿಕ ಸರ್ಕಾರ ಪತನವಾಗಿತ್ತು. ಸದ್ಯ ಮಧ್ಯಂತರ ಸರ್ಕಾರ ಅಧಿಕಾರದಲ್ಲಿದೆ.

‘ಹಸೀನಾ ಅವರು ಪ್ರತಿಭಟನೆಯನ್ನು ದಮನ ಮಾಡುವ ಸಲುವಾಗಿ ನಡೆಸಿದ ಹಿಂಸೆಯ ‘ಮಾಸ್ಟರ್‌ಮೈಂಡ್‌’ ಆಗಿದ್ದಾರೆ. ಹಸೀನಾ ಅವರೇ ತಪ್ಪಿತಸ್ಥರು ಎಂಬುದನ್ನು ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ಸಾಬೀತು ಮಾಡಲಾಗಿದೆ’ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.