ಉಡುಪಿ: ಜಿಲ್ಲೆಯ ರೈಸ್‌ಮಿಲ್‌ಗಳಿಂದ ರೈತರ ಭತ್ತ ಖರೀದಿ ವೇಳೆ ಭಾರಿ ಪ್ರಮಾಣದ ಮೋಸ: ಕೆಆರ್‌ಎಸ್‌ ಪಕ್ಷ ಆರೋಪ

ಕೆಆರ್ ಎಸ್ ಪಕ್ಷದ ಸುದ್ದಿಗೋಷ್ಟಿ

ಉಡುಪಿ: ಭತ್ತ ಕೃಷಿಕರು ತಾವು ಬೆಳೆದ ಭತ್ತವನ್ನು ಕಟಾವಿನ ಬಳಿಕ ರೈಸ್‌ಮಿಲ್‌ಗೆ ಕೊಂಡೊಯ್ದು ಮಾರಾಟ ಮಾಡುವಾಗ ರೈಸ್‌ಮಿಲ್‌ ಮಾಲಕರು ಭಾರೀ ಪ್ರಮಾಣದ ಮೋಸ, ವಂಚನೆ ಮಾಡುತಿದ್ದಾರೆ. ಇದರಿಂದ ವಿವಿಧ ಕಾರಣಗಳಿಂದ ವಂಚನೆಗೆ ಸಿಲುಕುವ ರೈತರು ದೊಡ್ಡ ಪ್ರಮಾಣದ ಶೋಷಣೆಗೂ ಬಲಿಯಾಗುತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ಪಕ್ಷ ಉಡುಪಿ ಜಿಲ್ಲಾ ಘಟಕ ಆರೋಪಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಆರ್‌ಎಸ್‌ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ರಘುಪತಿ ಭಟ್ ಅವರು, ರೈತ ಬೆಳೆದ ಭತ್ತವನ್ನು ಕೆ.ಜಿ.ಗೆ 23ರಿಂದ 27ರೂ.ಗಳಿಗೆ ಖರೀದಿಸುವ ರೈಸ್‌ಮಿಲ್‌ ಮಾಲಕರು, ಬಳಿಕ ಅಕ್ಕಿ ಮಾಡಿದ ಬಳಿಕ ಕೆ.ಜಿ.ಗೆ 54 ರೂ.ಗಳಿಗೆ ಅದೇ ರೈತನಿಗೆ ಮಾರುತ್ತಾರೆ. ಇದರಿಂದ ಒಂದು ಕ್ವಿಂಟಾಲ್‌ ಭತ್ತವನ್ನು ಮಾರುವ ರೈತನಿಗೆ ಕೇವಲ 50 ಕಿ.ಲೋ. ಅಕ್ಕಿ ಮರಳಿ ಸಿಗುತ್ತಿದೆ ಎಂದು ಹೇಳಿದರು.ಇದರಿಂದ ಕಷ್ಟಪಟ್ಟ ಬೇಸಾಯ ಮಾಡುವ ರೈತರಿಗೆ ದೊಡ್ಡಮಟ್ಟದ ನಷ್ಟ ಉಂಟಾಗುತಿದ್ದು, ದೊಡ್ಡ ದೊಡ್ಡ ರೈಸ್‌ಮಿಲ್‌ ಮಾಲಕರು, ದಲ್ಲಾಳಿಗಳು ಹಾಗೂ ಮದ್ಯವರ್ತಿಗಳು ಅನಧಿಕೃತವಾಗಿ, ಯಾವುದೇ ಶ್ರಮ ಪಡದೇ ಕುಳಿತಲ್ಲೇ ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತಿದ್ದಾರೆ. ಈ ಮೂಲಕ ಜಿಲ್ಲೆಯ ರೈತರು ರೈಸ್‌ಮಿಲ್ ಮಾಲಕರಿಂದ ತೀವ್ರ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದವರು ಆರೋಪಿಸಿದರು.

ಹಿಂದೆಲ್ಲಾ ಪ್ರತಿ ಊರುಗಳಲ್ಲಿ ಸಣ್ಣ ಸಣ್ಣ ರೈಸ್‌ಮಿಲ್‌ಗಳಿದ್ದು ರೈತರಿಗೆ ಅನುಕೂಲವಾಗುತ್ತಿದ್ದರೆ, ಇಂದು ಕೆಲವೇ ಕೆಲವು ದೊಡ್ಡ ದೊಡ್ಡ ರೈಸ್‌ಮಿಲ್‌ಗಳು ಮಾತ್ರವಿದ್ದು, ಇಲ್ಲಿ ನಿರಂತರವಾಗಿ ರೈತರು ಮೋಸ, ವಂಚನೆ ಹಾಗೂ ಶೋಷಣೆಗೆ ಗುರಿಯಾಗುತಿದ್ದಾರೆ ಎಂದರು.ಈ ಬಗ್ಗೆ ವಂಚನೆಗೊಳಗಾದ ಕಾರ್ಕಳ ತಾಲೂಕಿನ ರೈತ ಸಂಘದವರು ಕೆಆರ್‌ಎಸ್ ಪಕ್ಷಕ್ಕೆ ದೂರು ನೀಡಿದ್ದು, ನಾವು ಜಿಲ್ಲೆಯಾದ್ಯಂತ ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಇಡೀ ಜಿಲ್ಲೆಯಲ್ಲಿ ಇದೇ ರೀತಿ ರೈತರಿಗೆ ಮೋಸ ನಡೆಯುತ್ತಿರುವುದು ಮನದಟ್ಟಾಗಿದೆ. ಈ ಬಗ್ಗೆ ತಮ್ಮ ಪಕ್ಷ ಈಗಾಗಲೇ ಎಲ್ಲವನ್ನೂ ವಿವರಿಸಿ ಉಡುಪಿ ಜಿಲ್ಲಾಧಿಕಾರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಅರ್ಪಿಸಿದ್ದು, ಜಿಲ್ಲೆಯ ರೈತರನ್ನು ರೈಸ್ ಮಿಲ್ ಮಾಲಕರ ವಂಚನೆ, ಮೋಸ ಹಾಗೂ ಶೋಷಣೆಯಿಂದ ರಕ್ಷಿಸಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಾಜೇಶ್ ಕೆ.ವಿ., ಕೃಷಿ ವಿಭಾಗದ ಸಂಚಾಲಕ ನಿರುಪಾದಿ ಗೋಮಿಸಿ, ಕಾರ್ಯದರ್ಶಿ ಆರತಿ, ಸಂತೋಷ್‌, ರವಿಕುಮಾರ್, ಶ್ರೀನಿವಾಸ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.