ಉಡುಪಿ: ಎಸ್ ಡಿಪಿಐ ಮುಖಂಡ ರಿಯಾಜ್ ಕಡಂಬುಗೆ ಷರತ್ತುಬದ್ಧ ಜಾಮೀನು

ರಿಯಾಜ್ ಕಡಂಬು


ಉಡುಪಿ: ಉಡುಪಿ ನಗರ ಪೊಲೀಸ್ ಠಾಣೆಯಲ್ಲಿನ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಷರತ್ತು ಉಲ್ಲಂಘಿಸಿದ್ದ ಎಸ್ ಡಿ ಪಿ ಐ ಮುಖಂಡ ರಿಯಾಜ್ ಕಡಂಬು ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.ನಿನ್ನೆ ಉಡುಪಿ ನ್ಯಾಯಾಲಯವು ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು.ಜಾಮೀನು ಮಂಜೂರು ಮಾಡುವಾಗ ನ್ಯಾಯಾಧೀಶರು , ದ್ವೇಷ ಭಾಷಣ ಪುನರಾವರ್ತನೆ ಮಾಡುವಂತಿಲ್ಲ ಮತ್ತು ಪೊಲೀಸರ ತನಿಖೆಗೆ ಪೂರ್ಣ ಸಹಕಾರ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.ತಪ್ಪಿದ್ದಲ್ಲಿ ಜಾಮೀನು ರದ್ದು ಮಾಡುವುದಾಗಿಯೂ ನ್ಯಾಯಾಲಯ ಹೇಳಿದೆ. ಇದೇ ವರ್ಷ ಜುಲೈ ತಿಂಗಳಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿ ರಿಯಾಜ್ ಕಡಂಬು ವಿರುದ್ಧ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದ ಅವರು, ಜಾಮೀನು ಷರತ್ತನ್ನು ಉಲ್ಲಂಘಿಸಿದ್ದರು. ಆ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾದ ರಿಯಾಜ್ ಅವರನ್ನು ಉಡುಪಿ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು.ಅದರಂತೆ ನಿನ್ನೆಯಿಂದ ಅವರು ಹಿರಿಯಡ್ಕ ಜೈಲಿನಲ್ಲಿದ್ದರು.