ಉಡುಪಿ:'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭ ಭಾಯಿ ಪಟೇಲ್ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಬಿಜೆಪಿಯಿಂದ 'ಏಕತಾ ನಡಿಗೆ'

ಏಕತಾ ನಡಿಗೆ


ಉಡುಪಿ: ಹುಟ್ಟು ಸಾವಿನ ನಡುವೆ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಜನತೆ ಸದಾ ನೆನಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಒಂದು ದೇಶ ಎಂಬ ಪರಿಕಲ್ಪನೆಯಡಿ ರಾಷ್ಟ್ರೀಯ ಏಕೀಕರಣದ ರೂವಾರಿಯಾಗಿ ದೇಶದ ಸಮಗ್ರತೆಗೆ ಸಮರ್ಪಣಾ ಭಾವದ ಸೇವೆ ಸಲ್ಲಿಸಿರುವ ಧೀಮಂತ ನಾಯಕ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜೀವನಾದರ್ಶ ಸದಾ ಸ್ಮರಣೀಯ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಉಡುಪಿ ನಗರದ ಸಹಯೋಗದೊಂದಿಗೆ ದೇಶದ ಮೊದಲ ಉಪ ಪ್ರಧಾನಿ, 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಕಲ್ಸಂಕದಿಂದ ಬಿಜೆಪಿ ಜಿಲ್ಲಾ ಕಛೇರಿಯ ವರೆಗೆ ನಡೆದ 'ಏಕತಾ ನಡಿಗೆ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ದೇಶದ ನೂರಾರು ಕಡೆಗಳಲ್ಲಿ ರಾಜರ ಆಡಳಿತವಿದ್ದ ಸಂಸ್ಥಾನಗಳನ್ನು ದೇಶದೊಂದಿಗೆ ವಿಲೀನಗೊಳಿಸಿ ದೇಶದ ಅಖಂಡತೆ ಮತ್ತು ಏಕತೆಗೆ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಕೊಡುಗೆ ಅನನ್ಯ. ಅವರ ಉದಾತ್ತ ಚಿಂತನೆಗಳು ಪಕ್ಷದ ಕಾರ್ಯಕರ್ತರಿಗೆ ಪ್ರೇರಣಾದಾಯಕ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಮಹಾವೀರ ಹೆಗ್ಡೆ, ನಳಿನಿ ಪ್ರದೀಪ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.