![]() |
| ಆರ್.ಅಶೋಕ್ |
ಹುಬ್ಬಳ್ಳಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಅನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಕಾನೂನು ಎಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದಾದರೂ ಸಂಘ ನೋಂದಣಿ ಮಾಡಿಸಬೇಕು ಅಂತ ಕಾನೂನು ಇದೆಯಾ? ಈ ಸರಕಾರ ತನ್ನ ಆಡಳಿತ ವೈಫಲ್ಯ ಮುಚ್ಚಿಹಾಕಲು ಆರೆಸ್ಸೆಸ್ ವಿವಾದ ತಂದಿದೆ. ಆರೆಸ್ಸೆಸ್‌ಗೆ ಬರುವ ಹಣದ ಮೂಲದ ಬಗ್ಗೆ ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಮೊದಲು ತಮಗೆ ಎಲ್ಲಿಂದ ದುಡ್ಡು ಬರುತ್ತಿದೆ ಎಂಬುದನ್ನು ಘೋಷಿಸಿಕೊಳ್ಳಲಿ ಎಂದು ಆಗ್ರಹಿಸಿದರು.ಆರೆಸ್ಸೆಸ್ ದೇಶ ಪ್ರೇಮ ಬೆಳೆಸುವ ಸಂಸ್ಥೆ ಆರೆಸ್ಸೆಸ್ ಹೆಸರಿನಲ್ಲಿ ಯಾವುದೆ ಕಟ್ಟಡಗಳು ನೋಂದಾವಣೆ ಆಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿಂದ ದುಡ್ಡು ಬರುತ್ತೆ ಅಂತ ಪ್ರಿಯಾಂಕ್ ಖರ್ಗೆ ಹೇಳಲಿ. ಆರೆಸ್ಸೆಸ್ ಬಗ್ಗೆ ಕೇಳಲು ಸಂಸ್ಥೆಗಳಿವೆ, ಅವರು ಪ್ರಶ್ನೆ ಕೇಳುತ್ತಾರೆ ಎಂದು ಅಶೋಕ್ ಹೇಳಿದರು.
ಅತಿವೃಷ್ಠಿಯಿಂದ ಕಂಗಾಲಾಗಿರುವ ರೈತರಿಗೆ ಪರಿಹಾರ ನೀಡಲು ಇವರಿಗೆ ಯೋಗ್ಯತೆ ಇಲ್ಲ. ಈ ಸರಕಾರ ಪಾಪರ್ ಆಗಿದೆ. ಇವೆಲ್ಲ ವಿಚಾರಗಳ ಹಾದಿ ತಪ್ಪಿಸಲು ಆರೆಸ್ಸೆಸ್ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಅವರು ಕಿಡಿಕಾರಿದರು.
