![]() |
| ಮೃತ ಸಹೋದರಿಯರು |
ಮೈಸೂರು: ಮೈಸೂರಿನ ಪಿರಿಯಾಪಟ್ಟಣದ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಗ್ಯಾಸ್ ಗೀಸರ್ ಸೋರಿ ಅಕ್ಕ-ತಂಗಿ ದುರಂತ ಅಂತ್ಯ ಕಂಡಿರುವ ಘಟನೆ ಸಂಭವಿಸಿದೆ. ಗುಲ್ಫಾಮ್ (23) ಮತ್ತು ಆಕೆಯ ಸಹೋದರಿ ಸಿಮ್ರಾನ್ ತಾಜ್ (20) ಎಲ್ ಪಿಜಿ ಅನಿಲ ಸೋರಿ ಉಸಿರುಗಟ್ಟಿ ಸ್ನಾನಗೃಹದಲ್ಲಿ ಸಾವನ್ನಪ್ಪಿದ ಮೃತ ದುರ್ದೈವಿಗಳು.
ಪಿರಿಯಾಪಟ್ಟಣದ ಜೋನಿಗೇರಿ ಬೀದಿಯಲ್ಲಿ ಅಲ್ತಾಫ್ ಪಾಷಾ ಮತ್ತು ಅವರ ಕುಟುಂದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಸಹೋದರಿಯಬ್ಬರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದಾರೆ, ಆದರೆ ಸ್ನಾನಕ್ಕೆ ಹೋದವರು ಬಹಳ ಸಮಯವಾದರೂ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ತಂದೆ ಅಲ್ತಾಫ್ ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆಯಲಿಲ್ಲ, ಇದರಿಂದ ಸಂಶಯಗೊಂಡು ಬಾಗಿಲು ಹೊಡೆದು ಒಳಹೋಗಿ ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರೋದು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರೂ, ಆದರೆ ಆಸ್ಪತ್ರೆ ಹೋಗುವಷ್ಟರಲ್ಲೇ ಮೃತ ಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.ಯುವತಿಯರು ಸ್ನಾನಕ್ಕೆ ಹೋದಾಗ ಗೀಸರ್ ಗ್ಯಾಸ್ ನಿಂದ ಕಾರ್ಬನ್ ಮೋನಾಕ್ಸೆಡ್ ಸೇವಿಸಿ ಉಸಿರುಗಟ್ಟಿ ಯುವತಿಯರು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನೂ ಶವ ಪರೀಕ್ಷೆ ನಡೆಸಿ, ವರದಿಗೆ ಕಳುಹಿಸಲಾಗಿದೆ. ಪಿರಿಯಾಪಟ್ಟಣದ ಶವಾಗಾರದಲ್ಲಿ ಇಬ್ಬರೂ ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಬೆಟ್ಟದಪುರದ ಗ್ರಾಮದಲ್ಲಿ ಶುಕ್ರವಾರ ಸಂಜೆ ವೇಳೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
