ಉಡುಪಿ: ಫೇಸ್ ಬುಕ್ ಬರಹದ ಮೂಲಕ ಶಾಂತಿ ಕದಡಲು ಯತ್ನ ಆರೋಪ- ವಸಂತ ಗಿಳಿಯಾ‌ರ್ ವಿರುದ್ಧ ಕ್ರಮಕ್ಕೆ ಮನವಿ

ವಸಂತ್ ಗಿಳಿಯಾರ್

ಉಡುಪಿ: " ಕಲ್ಲಡ್ಕ ಪ್ರಭಾಕರ್ ಭಟ್ ಎನ್ನುವ ಶಕ್ತಿಯನ್ನು ಕೆಣಕಿ ಉಳಿದ ಸರ್ಕಾರವಿಲ್ಲ! ಭಟ್ಟರ ಬಂಧನಕ್ಕೆ ಒತ್ತಡವಿದೆ ಎನ್ನುವ ಮಾತು ಕೇಳಿಸಿಕೊಂಡೆ.

ಕರಾವಳಿ ಕಿಡಿ ಕಿಡಿಯಾದೀತು. ಪ್ರಭಾಕರ ಭಟ್ಟರ ಪ್ರಭಾವ ಏನೂ ಎನ್ನುವುದನ್ನು ಪ್ರದರ್ಶನ ಮಾಡುವ ರಿಸ್ಕಿಗೆ ಯಾರೂ ಕೈ ಹಾಕದೇ ಇರೋದು ಸೇಫ್ ! ಕರಾವಳಿ ಕರ್ನಾಟಕ ಶಾಂತಿಯಲ್ಲಿರಲಿ ಎನ್ನುವುದು ಸಲಹೆ "  ಎಂಬ ಒಕ್ಕಣೆ ಇರುವ ಬರಹವೊಂದನ್ನು ವಸಂತ್ ಗಿಳಿಯಾರ್  ತನ್ನ ಫೇಸ್ಟುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಇದರಿಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವಲ್ಲಿ ಪ್ರಚೋದನೆ ನೀಡಿದ ಆರೋಪದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಸಂಜೆ ಪೊಲೀಸರಿಗೆ ಮನವಿ ನೀಡಿದ್ದು , ಕೋಮು ಪ್ರಚೋದನೆ ನಡೆಸಿ ಕರಾವಳಿಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ವಸಂತ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಈ ಸಂದರ್ಭ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಕುಂದಾಪುರ ವಿಧಾನಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಮಂತ್ ಕುಂದಾಪುರ, ಕಾಳವಾರ ಗ್ರಾಮ ಪಂಚಾಯತ್‌ ಸದಸ್ಯರು ಹಾಗೂ ಕೆ. ಡಿ. ಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಕಾಂಗ್ರೆಸ್ ಮುಖಂಡ ಸುನಿಲ್ ಪೂಜಾರಿ ಕೋಡಿ, ಕುಂದಾಪುರ ವಲಯ ಸಹಬಾಳ್ವೆ ಸಂಚಾಲಕ ರಾಮಕೃಷ್ಣ ಹೇರ್ಳೆ, ಕುಂದಾಪುರ ಪುರಸಭೆ ನಾಮ ನಿರ್ದೇಶಿತ ಸದಸ್ಯ ಅಶೋಕ್‌ ಸುವರ್ಣ, ಕುಂದಾಪುರ ಪುರಸಭೆ ಮಾಜಿ ಸದಸ್ಯ ಕೇಶವ ಭಟ್, ಕುಮಾರ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್ ನಿಂದ ಮನವಿ