ಬೆಂಗಳೂರು: "ಪೇಪರ್ ಸಿಂಹ, ನಿಮ್ಮ ಕತ್ತಲೆ ಜಗತ್ತಿನಲ್ಲಿ ಎಂತೆಂತಹ ಕರಾಳ ಕತೆಗಳ ರಹಸ್ಯ ಅಡಗಿವೆ? ಕತ್ತಲೆ ಜಗತ್ತಿನ ರಹಸ್ಯಗಳ ಪುಸ್ತಕಕ್ಕೆ ನೀವು ತಡೆಯಾಜ್ಞೆ ತಂದಿರುವುದೇಕೆ? ಕತ್ತಲೆ ಜಗತ್ತಿನ ರಹಸ್ಯಗಳ ಬಗ್ಗೆ ಭಯವೇಕೆ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ ಸುದ್ದಿಯಲ್ಲಿರುವ ಸಲುವಾಗಿ ಮೈಸೂರಿನ ಪತ್ರಕರ್ತರ ಕೈಕಾಲು ಹಿಡಿದು ಪ್ರತಿದಿನವೂ ನನ್ನ ಪ್ರತಿಕ್ರಿಯೆ ತಗೋಳಿ ಅಂತ ಅಂಗಲಾಚುತ್ತಿದ್ದಾರೆ ಎಂಬುದು ಮಾಧ್ಯಮ ಮಿತ್ರರ 'ಆಫ್ ದಿ ರೆಕಾರ್ಡ್' ವರದಿ ಎಂದು ವ್ಯಂಗ್ಯವಾಡಿದ್ದಾರೆ.
ಎಲ್ಲ ವಿಷಯಕ್ಕೂ ಬಾಯಿ ಹಾಕುವ ಪ್ರತಾಪ್ ಸಿಂಹ, ಬಿಜೆಪಿ ಪಕ್ಷದ ಯಾವ 'ಪೊಸಿಷನ್'ನಲ್ಲಿದ್ದಾರೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು. ನನ್ನ ಅರ್ಹತೆಯನ್ನು ಪ್ರಶ್ನಿಸುವ ಪ್ರತಾಪ್ ಸಿಂಹರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಅವರಿಗೆ ಅರ್ಹತೆ ಇಲ್ಲದ್ದಕ್ಕೆ ಅಲ್ಲವೇ? ಎಂದು ಅವರು ಹೇಳಿದ್ದಾರೆ.ನನ್ನ ಅರ್ಹತೆಯ ಬಗ್ಗೆ ಇಲಾಖೆಗಳಲ್ಲಿ ನನ್ನ ಕಾರ್ಯವೈಖರಿಯ ಬಗ್ಗೆ ನಾನು ಹೇಳಿಕೊಳ್ಳುವುದಕ್ಕಿಂತ ಬಿಜೆಪಿಯ ಕೇಂದ್ರ ಸರಕಾರದ ದಾಖಲೆಗಳು, ಅಂಕಿ ಅಂಶಗಳು ಹೇಳುತ್ತವೆ. ಪಂಚಾಯತ್ ರಾಜ್ ವಿಕೇಂದ್ರಿಕರಣದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದೆ ಎಂದು ಹೇಳಿದ್ದು ಕೇಂದ್ರ ಸರಕಾರ. ಕರ್ನಾಟಕದ ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ದಾಖಲೆಯ ಸಾಧನೆ ಮಾಡಿದೆ ಎಂದು ಒಪ್ಪಿಕೊಂಡಿದ್ದು ಕೇಂದ್ರ ಸರಕಾರ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಐಟಿ ರಫಿನಲ್ಲಿ ಶೇ.38ರಷ್ಟು ಪಾಲು ಹೊಂದುವ ಮೂಲಕ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ, ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಕೇಂದ್ರಗಳನ್ನು ಹೊಂದುವ ಮೂಲಕ ನವೋದ್ಯಮಗಳಿಗೆ ಉತ್ತೇಜನ ನೀಡುವ ಪ್ರಥಮ ರಾಜ್ಯ ಕರ್ನಾಟಕ ಎಂದು ಅವರು ಹೇಳಿದ್ದಾರೆ.
ಪ್ರತಾಪ್ ಸಿಂಹ ಅವರು ಒಂದಿಷ್ಟು ಅಧ್ಯಯನ ನಡೆಸುವ, ಆಗುಹೋಗುಗಳ ಸುದ್ದಿಯನ್ನು ಓದುವ ಅಭ್ಯಾಸ ಹೊಂದಿದ್ದರೆ ಇದೆಲ್ಲವೂ ತಿಳಿಯುತ್ತಿತ್ತು. ಅಂದಹಾಗೆ ಪ್ರತಾಪ್ ಸಿಂಹ ಅವರೇ, ನಿಮ್ಮ ನರೇಂದ್ರ ಮೋದಿಯವರ ವಿದ್ಯಾರ್ಹತೆ ಏನು? ಸರ್ಟಿಫಿಕೇಟ್ ಎಲ್ಲಿ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ
