![]() |
| ಪಿಟಿಐ ಚಿತ್ರ |
ಹೈದರಾಬಾದ್: 19 ಜನರ ಸಜೀವ ದಹನಕ್ಕೆ ಕಾರಣವಾದ, ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಏಸಿ ಬಸ್ ದುರಂತದ ಬಗ್ಗೆ ತನಿಖೆ ಮುಂದುವರಿದಿದ್ದು, ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ವೇಳೆ ಈ ಬಸ್‌ನಲ್ಲಿ 40 ಲಕ್ಷ ಮೌಲ್ಯದ 234 ಹೊಸ ಸ್ಮಾರ್ಟ್‌ಫೋನ್‌ಗಳಿದ್ದವು. ಇವು ಅಪಘಾತದ ವೇಳೆ ಸ್ಫೋಟಗೊಂಡಿದ್ದವು. ಇವುಗಳನ್ನು ಬೆಂಗಳೂರಿನಲ್ಲಿರುವ ಗ್ರಾಹಕರಿಗೆ ಪಾರ್ಸೆಲ್ ಮೂಲಕ ಬಸ್‌ನಲ್ಲಿ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಶುಕ್ರವಾರ ನಸುಕಿನ ಜಾವ ಸಂಭವಿಸಿದ ಈ ದುರಂತದಲ್ಲಿ ಬಸ್ ಚಾಲಕ, ಸಿಬ್ಬಂದಿಯೂ ಸೇರಿ 43 ಜನರಿದ್ದರು. ಈ ಘಟನೆಯಲ್ಲಿ 19 ಜನ ಬಸ್‌ನಿಂದ ಹೊರಗೆ ಬರಲಾಗದೇ ಸಜೀವ ದಹನಗೊಂಡರೆ ಇತರರು ಕಿಟಕಿಯನ್ನು ಒಡೆದು ಪಾರಾಗುವಲ್ಲಿ ಯಶಸ್ವಿಯಾಗಿದ್ದರು. ಅವರಲ್ಲೂ ಅನೇಕರಿಗೆ ಗಂಭೀರ ಗಾಯಗಳಾಗಿವೆ.
ಇ-ಕಾಮರ್ಸ್ ಕಂಪನಿಗೆ ಕಳುಹಿಸಲಾಗಿದ್ದ 46 ಲಕ್ಷ ರೂ. ಮೌಲ್ಯದ ಹೊಸ ಸ್ಮಾರ್ಟ್‌ಫೋನ್
ಈ ಘಟನೆಯ ತನಿಖೆ ನಡೆಸುತ್ತಿರುವ ವಿಧಿವಿಜ್ಞಾನ ತಜ್ಞರು ಈ ಹೊಸ ಫೋನ್‌ಗಳ ಬ್ಯಾಟರಿಗಳು ಸ್ಫೋಟಗೊಂಡಿದ್ದರಿಂದಲೇ ಬಸ್‌ಗೆ ಹೊತ್ತಿ ಉರಿದ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಿದ್ದು, 19 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದ್ದಾರೆ. 234 ಸ್ಮಾರ್ಟ್‌ಫೋನ್‌ಗಳು 46 ಲಕ್ಷ ರೂ. ಮೌಲ್ಯದ್ದಾಗಿದ್ದವು. ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್ ಅವರು ಅವುಗಳನ್ನು ಬೆಂಗಳೂರಿಗೆ ಪಾರ್ಸೆಲ್ ಆಗಿ ರವಾನಿಸಿದ್ದರು. ಇವುಗಳನ್ನು ಬೆಂಗಳೂರಿನ ಇ-ಕಾಮರ್ಸ್ ಕಂಪನಿಗೆ ಕಳುಹಿಸಲಾಗಿತ್ತು ಅಲ್ಲಿಂದ ಗ್ರಾಹಕರಿಗೆ ಫೋನ್‌ಗಳನ್ನು ಪೂರೈಸಬೇಕಿತ್ತು. ಫೋನ್‌ಗೆ ಬೆಂಕಿ ಹೊತ್ತಿಕೊಂಡಾಗ ಬ್ಯಾಟರಿಗಳು ಸ್ಫೋಟಗೊಳ್ಳುವ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
