
ಬೇಲೂರು:ಗಣಪನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣ- ಆರೋಪಿ ಲೀಲಮ್ಮ ಪೊಲೀಸ್ ವಶಕ್ಕೆ
ಹಾಸನ: ಬೇಲೂರಿನಲ್ಲಿ ದೇವಾಲಯದ ಒಳಗಿನ ಗಣಪನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಆಧರಿಸಿ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಪುರಸಭೆ ಆವರಣದಲ್ಲಿರುವ ವರಸಿಧಿ ಗಣಪತಿ ಮೂರ್ತಿಗೆ ಮಹಿಳೆಯೊಬ್ಬರು ಚಪ್ಪಲಿ ಹಾರ ಹಾಕಿದ್ದು, ಆಕೆ ಒಳ ಬಂದಿರುವುದು, ಹೊರ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಆಧರಿಸಿ ಪೊಲೀಸರು ಕೊನೆಗೂ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನದ ಗುಡ್ಡೇನಹಳ್ಳಿ ಬಳಿ ಲೀಲಮ್ಮ ಎನ್ನುವ ಮಹಿಳೆಯನ್ನು ಬಾಣಾವರ PSI ಸುರೇಶ್ ನೇತೃತ್ವದ ತಂಡ ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಹಾಸನ ಎಸ್ಪಿ ಹೇಳಿದ್ದೇನು?
ಲೀಲಮ್ಮ ಬಂಧನ ಸಂಬಂಧ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹಾಸನದ ವಿಜಯನಗರ ಬಡಾವಣೆ ನಿವಾಸಿ ಲೀಲಮ್ಮ ಎನ್ನುವ ಮಹಿಳೆಯನ್ನು ಬಂಧಿಸಲಾಗಿದ್ದು, ಬಂಧಿತ ಲೀಲಮ್ಮಗೆ ಮಾನಸಿಕ ಸ್ಥಿಮಿತವಿಲ್ಲವೆನ್ನುವ ಮಾಹಿತಿಯಿದೆ. ನಿನ್ನೆ ರಾತ್ರಿ 8.30ಕ್ಕೆ ಹಾಸನದಿಂದ ಬೇಲೂರು ಕಡೆ ಬಸ್ ಹತ್ತಿದ್ದಳು. ನಂತರ ಚಿಕ್ಕಮಗಳೂರಿಗೆ ಹೋಗಿ ವಾಪಸ್ ಬೇಲೂರಿಗೆ ಬಂದಿದ್ದಳು. ಬೇಲೂರಿನಲ್ಲಿ ಬಸ್ ಇಳಿದು ಪುರಸಭೆ ಆವರಣಕ್ಕೆ ತೆರಳಿದ್ದ ಮಹಿಳೆಯ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇಗುಲಕ್ಕೆ ಹೋಗಿ ಬಂದ ಬಳಿಕ ಮತ್ತೆ ಹಾಸನಕ್ಕೆ ಬಂದಿರುವ ಮಾಹಿತಿ ಇದೆ. ಹಾಸನದ ವಿಜಯನಗರದಲ್ಲಿರುವ ಮನೆ ಬಳಿ ವಶಕ್ಕೆ ಪಡೆದಿದ್ದು, ಲೀಲಮ್ಮಗೆ ಸದ್ಯಕ್ಕೆ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ. ಲೀಲಮ್ಮಳನ್ನು ವಶಕ್ಕೆ ಪಡೆದು ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಹಿಂದೆ ಮನೆಯಲ್ಲೂ ಇದೇ ರೀತಿ ವರ್ತಿಸಿದ್ದ ಬಗ್ಗೆ ಮಾಹಿತಿಯಿದೆ ಎಂದು ಮಾಹಿತಿ ನೀಡಿದರು.