ಉಡುಪಿ: ಜಿಎಸ್‌ಟಿ ಸುಧಾರಣೆ: ಮೋದಿ ಸರ್ಕಾರದಿಂದ ಜನಸಾಮಾನ್ಯರಿಗೆ ದೀಪಾವಳಿ ಬೆಳಕು ನವರಾತ್ರಿಯ ಶಕ್ತಿ- ಶ್ರೀನಿಧಿ ಹೆಗ್ಡೆ

ಉಡುಪಿ: ಜಿಎಸ್‌ಟಿ ಸುಧಾರಣೆ: ಮೋದಿ ಸರ್ಕಾರದಿಂದ ಜನಸಾಮಾನ್ಯರಿಗೆ ದೀಪಾವಳಿ ಬೆಳಕು ನವರಾತ್ರಿಯ ಶಕ್ತಿ- ಶ್ರೀನಿಧಿ ಹೆಗ್ಡೆ

 


ಉಡುಪಿ: ನಾಲ್ಕು ಸ್ಲಾಬ್ ಗಳಲ್ಲಿದ್ದ ಜಿ.ಎಸ್.ಟಿ ತೆರಿಗೆ ಮಿತಿಯನ್ನು ಎರಡು ಸ್ಲಾಬ್ ಮಾಡುವ ಮೂಲಕ ಔಷಧಿ, ಜೀವವಿಮೆಯೂ ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡಲಾಗಿದೆ. ಈ ಮೂಲಕ ದೇಶದ ಆರ್ಥಿಕ ಇತಿಹಾಸದಲ್ಲಿ ಮಹತ್ವದ ತಿರುವು ಮೂಡಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಇದು ದೇಶದ ಸಾಮಾನ್ಯ ಜನ, ಮಧ್ಯಮ ವರ್ಗ, ರೈತರು ಹಾಗೂ ವ್ಯಾಪಾರಿಗಳ ಜೀವನದಲ್ಲಿ ಹಾಗೂ ದೇಶದ ಆರ್ಥಿಕತೆಯಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಬಣ್ಣಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವರಾದ  ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿ ಎಸ್ ಟಿ ಮಂಡಳಿ ಸಭೆಯಲ್ಲಿ, ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುವ ನಿರ್ಣಯ ಕೈಗೊಳ್ಳಲಾಗಿದೆ. ಪ್ರಸ್ತುತ, ನಾಲ್ಕು ಜಿ ಎಸ್‌ ಟಿ  ಸ್ಲ್ಯಾಬ್‌ಗಳಿದ್ದು, ಶೇ. 5, ಶೇ, 12, ಶೇ. 18 ಮತ್ತು ಶೇ, 28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಶೇ.12 ಮತ್ತು ಶೇ. 28ರ ತೆರಿಗೆ ಸ್ಲ್ಯಾಬ್‌ಗಳನ್ನು ತೆಗೆದುಹಾಕಿ, ಕೇವಲ ಶೇ. 5 ಮತ್ತು ಶೇ. 18ರ ಎರಡು ಹಂತದ ತೆರಿಗೆ ರಚನೆ ಜಾರಿಗೆ ತರಲು ಸಭೆ ಒಪ್ಪಿಗೆ ಸೂಚಿಸಿದ್ದು, ಇದು ಸೆಪ್ಟೆಂಬರ್ 22ರಿಂದ ಅಂದರೆ ನವರಾತ್ರಿಯ ಆರಂಭದ ದಿನದಂದು ಜಾರಿಯಾಗಲಿದೆ.

ಸ್ವಾತಂತ್ರ್ಯ ದಿನಾಚರಣೆ ದಿನ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದಂತೆ ದೇಶದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ, ರೈತರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಜಿ ಎಸ್ ಟಿ ಕಡಿತ ಮಾಡುವ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸುವ ಮೂಲಕ ನವರಾತ್ರಿ ಹಾಗೂ ದೀಪಾವಳಿ ಹಬ್ಬಕೆ ಶುಭ ಸುದ್ದಿ ನೀಡಿದೆ.

ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರು ಬಳಸುವ ವಸ್ತುಗಳ ಮೇಲೆ "ಸಂಪೂರ್ಣ ತೆರಿಗೆ ಕಡಿತ ಮಾಡಲಾಗಿದೆ" ಹಾಗೂ ಜಿ ಎಸ್ ಟಿ ಸ್ಲ್ಯಾಬ್ ಗಳ ಪರಿಷ್ಕರಣೆಯಲ್ಲಿ ಕಾರುಗಳ ಮೇಲಿನ ಜಿ ಎಸ್ ‌ಟಿ ಯನ್ನು ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಗಿದ್ದು, ಹಬ್ಬದ ಅವಧಿಯಲ್ಲಿ ವಾಹನಗಳ ಬೆಲೆಯಲ್ಲಿ ಭಾರೀ ಕಡಿತವಾಗಲಿದೆ.

ಆರೋಗ್ಯ ವಿಮೆ ಹಾಗೂ ಜೀವ ವಿಮೆ ಎರಡೂ ಅಲ್ಲದೆ, ಇನ್ನು ಕೆಲವು ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ಕೆಲವು ವಸ್ತುಗಳಿಗೆ ಜಿಎಸ್ಟಿ ರದ್ದುಗೊಳಿಸಲಾಗಿದೆ. ಈ ಮೊದಲು ಇದು ಶೇ.18ರ ಸ್ಲ್ಯಾಬ್ನಲ್ಲಿತ್ತು. ಈ ನಿರ್ಧಾರವು ಸಾಮಾನ್ಯ ಜನರಿಗೆ, ವಿಶೇಷವಾಗಿ ವಿಮೆ ಖರೀದಿಸುವವರಿಗೆ ದೊಡ್ಡ ಆರ್ಥಿಕ ರಿಯಾಯಿತಿಯನ್ನು ಒದಗಿಸಲಿದೆ. ವಿಮಾ ಸೇವೆಗಳ ಮೇಲಿನ ಅಸ್ತಿತ್ವದಲ್ಲಿರುವ 18% ಜಿಎಸ್‌ಟಿಯನ್ನು ಎರಡು-ಮೂರು ವಿಭಿನ್ನ ವರ್ಗಗಳಾಗಿ ವಿಂಗಡಿಸಲಾಗುವುದು ಎಂದು ಹೇಳಿದರು. ಟರ್ಮ್ ಲೈಫ್, ಯುಲಿಪ್ ಅಥವಾ ಎಂಡೋಮೆಂಟ್ ಪಾಲಿಸಿಗಳು, ಅವುಗಳ ಮರುವಿಮೆ ಮತ್ತು ಎಲ್ಲ ವೈಯಕ್ತಿಕ ಜೀವ ವಿಮಾ ಪಾಲಿಸಿಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಸಾಮಾನ್ಯ ಜನರಿಗೆ ವಿಮೆಯನ್ನು ಖರೀದಿಸಲು ಸುಲಭವಾಗುತ್ತದೆ. ದೇಶದಲ್ಲಿ ವಿಮಾ ವ್ಯಾಪ್ತಿ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

33 ಜೀವರಕ್ಷಕ ಔಷಧಿಗಳ ಮೇಲೆ ಈ ಹಿಂದೆ ಅನ್ವಯಿಸಲಾಗಿದ್ದ 12% ಜಿ ಎಸ್ ‌ಟಿ ಯನ್ನು ತೆಗೆದುಹಾಕಿ ಶೂನ್ಯಗೊಳಿಸಲಾಗಿದೆ ಎಂದು ಹೇಳಿದರು. ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‌ಟಿಯನ್ನು ಶೂನ್ಯಗೊಳಿಸಲಾಗಿದೆ. ಅನೇಕ ಔಷಧಿಗಳ ಮೇಲಿನ ಜಿಎಸ್‌ಟಿಯನ್ನು ಶೇ. 18 ರಿಂದ 5 ಕ್ಕೆ ಇಳಿಸಲಾಗಿದೆ. ಇದರೊಂದಿಗೆ, ಥರ್ಮಾಮೀಟರ್‌ಗಳು, ವೈದ್ಯಕೀಯ ಆಮ್ಲಜನಕ, ರೋಗನಿರ್ಣಯ ಕಿಟ್‌ಗಳು, ಗ್ಲುಕೋಮೀಟರ್‌ಗಳು, ಪರೀಕ್ಷಾ ಪಟ್ಟಿಗಳು ಮತ್ತು ಕನ್ನಡಕಗಳ ಮೇಲಿನ ಜಿ ಎಸ್ ‌ಟಿ ದರವನ್ನು 5% ಕ್ಕೆ ಇಳಿಸಲಾಗಿದೆ. ಇದಕ್ಕೂ ಮೊದಲು, ಇವುಗಳ ಮೇಲೆ ಜಿ ಎಸ್ ‌ಟಿ ಯನ್ನು ಶೇ. 12 ರಿಂದ 18 ಕ್ಕೆ ಸಂಗ್ರಹಿಸಲಾಗಿತ್ತು. ಈ ಬದಲಾವಣೆಯಿಂದಾಗಿ ಸಾಮಾನ್ಯ ಜನರಿಗೆ ತುಂಬಾ ಅನುಕೂಲವಾಗಲಿದೆ.

ಜಿ ಎಸ್ ಟಿ ಕಡಿತ ಸರಳೀಕರಣ ಮಾಡುವ ಮೂಲಕ ಕೇಂದ್ರ ಸರ್ಕಾರ ಸಾಮಾನ್ಯ ಜನತೆಗೆ ಹೊರೆ ಕಮ್ಮಿ ಮಾಡುವ ಮೂಲಕ ಹಾಗೂ ಉದ್ದಿಮೆದಾರರಿಗೆ ಉತ್ತೇಜನ ನೀಡುವುದರೊಂದಿಗೆ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಇದು ಮಹತ್ವದ ಹೆಜ್ಜೆ ಮುಂದಡಿ ಇಟ್ಟಿರುವ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಜಿ ಎಸ್ ಟಿ  ಕಡಿತಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು  ಇಂದು ಇಂಗು ತಿಂದ ಮಂಗನಂತೆ ವರ್ತಿಸುತ್ತಾ ಇದ್ದಾರೆ. ಜಿ ಎಸ್ ಟಿ ಕಡಿತದ ಬಗ್ಗೆ ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಲಿ ಎಂದು ಶ್ರೀನಿಧಿ ಹೆಗ್ಡೆ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article