ಉಡುಪಿ: ಹಿಂದಿ ಹೇರಿಕೆ ವಿರುದ್ಧ ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ- ಎಚ್ಚರಿಕೆ

 


ಉಡುಪಿ: ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ವ್ಯವಸ್ಥಿತ ಕುತಂತ್ರ ನಡೆಯುತ್ತಿದೆ. ಮೊಟ್ಟ ಮೊದಲ ಬಾರಿ ಈ ರಾಜಭಾಷಾ ಸಮಿತಿಗೆ ನೇರವಾಗಿ ಬಿಸಿ ಮುಟ್ಟಿಸುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದೆ.ದೇಶದಲ್ಲಿ ಈಗ ಇರುವುದು ಪ್ರಜಾಪ್ರಭುತ್ವ, ಜನರ ಆಳ್ವಿಕೆಯ ಕಾಲದಲ್ಲಿ ನಾವು ಇದ್ದೇವೆ. ರಾಜಪ್ರಭುತ್ವ ಹೋಗಿ ಎಷ್ಟೋ ದಶಕಗಳಾಗಿವೆ. ರಾಜರೇ ಇಲ್ಲದ ಕಾಲದಲ್ಲಿ ರಾಜಭಾಷೆ ಇರಲು ಹೇಗೆ ಸಾಧ್ಯ? ದೇಶದಲ್ಲಿ ಈಗ ಯಾವುದೇ ರಾಜಭಾಷೆಗಳು ಇಲ್ಲ. ಇರುವುದು ನೆಲದ ಭಾಷೆಗಳು, ಜನರ ಭಾಷೆಗಳು. ರಾಜಭಾಷೆ ಎಂಬುದೇ ಪ್ರಜಾಪ್ರಭುತ್ವ ವಿರೋಧಿ.ಒಕ್ಕೂಟ ಸರ್ಕಾರ ರಾಜಭಾಷಾ ಸಮಿತಿ/ಆಯೋಗವನ್ನು ಈ ಕೂಡಲೇ ರದ್ದುಪಡಿಸಬೇಕು. ರಾಜಭಾಷೆಯ ಹೆಸರಲ್ಲಿ ಹಿಂದಿ ಹೇರುವುದನ್ನು ನಾವು ಸಹಿಸುವುದಿಲ್ಲ. ಹಿಂದಿಹೇರಿಕೆ ದೇಶಕ್ಕೆ ಮಾರಕ ಮಾತ್ರವಲ್ಲ, ಭಾರತದ ಐಕ್ಯತೆಗೆ ಧಕ್ಕೆ ತರುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅ.ರಾ ಪ್ರಭಾಕರ ಪೂಜಾರಿ ಹೇಳಿದ್ದಾರೆ.

ಮಣಿಪಾಲದಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ  ನೇತೃತ್ವ ವಹಿಸಿ ಅವರು ಮಾತನಾಡಿದರು.ಒಕ್ಕೂಟ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಹಿಂದಿ ನುಡಿಗೆ ನೀಡಿರುವ ಹೆಚ್ಚುಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ ಎಲ್ಲ ಭಾಷೆಗಳನ್ನು ಒಕ್ಕೂಟ ಸರ್ಕಾರದ ಅಧಿಕೃತ ಆಡಳಿತ/ಸಂವಹನ ಭಾಷೆಗಳನ್ನಾಗಿ ಮಾಡಬೇಕು. ದೇಶದ ಎಲ್ಲ ನುಡಿಗಳೂ ಸಮಾನ ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭ ಉಪಾಧ್ಯಕ್ಷರಾದ ಅನಿಲ್ ಪೂಜಾರಿ, ಸಾಬುದ್ದೀನ್ , ನಗರ ಅಧ್ಯಕ್ಷ ಅಜರುದ್ದಿನ್, ಜಿಲ್ಲಾ ಸಂಚಾಲಕ ಕೃಷ್ಣಪಂಗಾಳ, ಸುಧಾಕರ್ ಕಲ್ಮಾಡಿ ,ಕಾಪು ತಾಲೂಕು ಅಧ್ಯಕ್ಷ ವೀರೇಶ್  ಕಾರ್ಕಳ ತಾಲೂಕು ಅಧ್ಯಕ್ಷ ಇಮ್ರಾನ್ ಶೇಕ್ ,ಕುಂದಾಪುರ ತಾಲೂಕು ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಹಿಳಾ ಉಪಾಧ್ಯಕ್ಷೆ ಅಶ್ವಿನಿ ನಾಯಕ್ , ಅನಿತಾ , ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.