ಮಾಲೂರು ಕಾಂಗ್ರೆಸ್‌ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್‌ !

 


ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್‌ ಅಸಿಂಧುಗೊಳಿಸಿದೆ. ಮಾತ್ರವಲ್ಲದೇ, ಮತಗಳ ಮರು ಎಣಿಕೆ ಮಾಡುವಂತೆ ಸೂಚನೆ ನೀಡಿದೆ.

2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಆ‌ರ್.ದೇವದಾಸ್ ಅವರದ್ದ ಪೀಠ ವಿಚಾರಣೆ ನಡೆಸಿತು. ಕಳೆದ ಎರಡು ವರ್ಷಗಳ ವಿಚಾರಣೆಯ ಬಳಿಕ ಹೈಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ.ಚುನಾವಣೆ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿಯು ಆರೋಪ ಮಾಡಿದ್ದರು. ಹೀಗಾಗಿ, ಕೋರ್ಟ್ ಮತ್ತೊಮ್ಮೆ ಎಣಿಕೆ ಮಾಡುವಂತೆ ಸೂಚನೆ ನೀಡಿದೆ.

ತನ್ನದೇ ಆದೇಶಕ್ಕೆ ತಾತ್ಕಾಲಿಕ ತಡೆ

ಶಾಸಕರಾಗಿ ಕೆವೈ ನಂಜೇಗೌಡ ಅವರ ವಕೀಲರ ಮನವಿ ಮೇರೆಗೆ ಶಾಸಕ ಸ್ಥಾನ ಅಸಿಂಧು ಎಂದು ನೀಡಿದ್ದ ಆದೇಶಕ್ಕೆ 30 ದಿನಗಳ ಕಾಲ ಹೈಕೋರ್ಟ್ ತಡೆ ನೀಡಿದೆ. ಅಷ್ಟರಲ್ಲಿ ಶಾಸಕರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಬಹುದು. ಒಂದು ವೇಳೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ನಿರ್ದೇಶನ ಬರದಿದ್ದರೆ ಶಾಸಕ ಸ್ಥಾನ ಅಸಿಂಧುವಾಗಲಿದೆ.