
ತಲಪಾಡಿ ಟೋಲ್ ಗೇಟ್ ಬಳಿ ಭೀಕರ ಅಪಘಾತ: ಮಗು ಸೇರಿ ಐವರು ಸಾವು
ಉಳ್ಳಾಲ: ತಲಪಾಡಿ ಟೋಲ್ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಕೆಸಿ ರೋಡ್‌ನಿಂದ ಬರುತ್ತಿದ್ದ ರಿಕ್ಷಾ ಮತ್ತು ಬಸ್ ಮಧ್ಯೆ ಅಪಘಾತ ನಡೆದಿದ್ದು, ರಿಕ್ಷಾದಲ್ಲಿದ್ದ ಕೆಸಿ ರೋಡ್ ಮೂಲದವರೆನ್ನಲಾದ ಐವರು ಮೃತಪಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದೆ ಎನ್ನಲಾಗುತ್ತಿದೆ. ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ.ಕಾಸರಗೋಡು ಜಿಲ್ಲೆಯ ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಮಂಗಳೂರಿನಿಂದ ಕಾಸರಗೋಡಿಗೆ ವೇಗವಾಗಿ ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಹಿಂದಕ್ಕೆ ಸರಿದು ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸಿಲುಕಿದ ಆಟೋರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಗಾಯಾಳುಗಳಲ್ಲಿ ಹಲವರನ್ನು ತಕ್ಷಣ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.
ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಠಾಣಾ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಮಂಜೇಶ್ವರ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಮತ್ತು ಮಂಗಳೂರು ಮತ್ತು ದೇರ್ಲಕಟ್ಟೆಯ ಆಸ್ಪತ್ರೆಯ ಶವಾಗಾರಗಳಿಗೆ ಸ್ಥಳಾಂತರಿಸಲಾಗಿದೆ.