
ಉಡುಪಿ: ಅ.30: ಸಿ.ಎಸ್.ಐ ಮಿಷನ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕ, (ಮ್ಯಾಮೋಗ್ರಫಿ ) ಉದ್ಘಾಟನೆ
ಉಡುಪಿ: ಸಿ.ಎಸ್.ಐ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆ, ಉಡುಪಿ, ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕದ ಉದ್ಘಾಟನೆ ಶನಿವಾರ, ಆಗಸ್ಟ್ 30ರಂದು ಬೆಳಿಗ್ಗೆ 10 ಗಂಟೆಗೆ ಆಸ್ಪತ್ರೆಯ ಚಾಪೆಲ್ ನಲ್ಲಿ ಜರಗಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಘಟಕದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಸ್ವರೂಪ ಟಿಕೆ ಉದ್ಘಾಟಿಸಲಿದ್ದು, ಮುಖ್ಯ ಅಥಿತಿಗಳಾದ ಸಿಎಸ್ ಐ ಸಭೆಯ ಕೋಶಾಧಿಕಾರಿ ರೆವರೆಂಡ್ ಐವನ್ ಡಿ ಸೋನ್ಸ್ ಗೌರವ ಅತಿಥಿಗಳಾಗಿ ಭಾರತಿ ಹೇಮಚಂದ್ರ, ಡಾ. ದೀವಾ ರಾವ್ ಮತ್ತು ಶ್ರೀಮತಿ ತನುಜಾ ಮಾಬೆನ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಈ ಘಟಕವು ಮಹಿಳೆಯರಲ್ಲಿ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ತಡೆಗಟ್ಟುವಲ್ಲಿ, ವಿಶೇಷವಾಗಿ ಉಡುಪಿ ಹಾಗೂ ಸುತ್ತಮುತ್ತಲಿನ ಕರಾವಳಿ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಬಹಳಷ್ಟು ಸಹಕಾರಿಯಾಗಲಿದೆ. ಇದು ಸಾರ್ವಜನಿಕ ಆರೋಗ್ಯ ಹಾಗೂ ರೋಗ ತಡೆಗಟ್ಟುವಿಕೆಯ ಆಸ್ಪತ್ರೆಯ ಸೇವೆಗಳಲ್ಲಿ ಇನ್ನೊಂದು ಮೈಲಿಗಲ್ಲಾಗಿದೆಯೆಂದು ಸೂಚಿಸುತ್ತದೆ ಎಂದರು.
ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಮರಣಗಳಿಗೆ ಪ್ರಮುಖ ಕಾರಣವಾಗಿದ್ದು, ಪಶ್ಚಿಮ ದೇಶಗಳ ಜೊತೆ ಹೋಲಿಸಿದರೆ ಭಾರತದಲ್ಲಿ ಈ ರೋಗದಿಂದ ಸಾವಿನ ಪ್ರಮಾಣ ಹೆಚ್ಚು ಆದರೆ ಸಮಯೋಚಿತ ತಪಾಸಣೆ ಮತ್ತು ಪತ್ತೆಯಿಂದ ಈ ರೋಗದ ಮೇಲೆ ನಿಯಂತ್ರಣ ಸಾಧ್ಯ.ಹೊಸದಾಗಿ ಸ್ಥಾಪಿಸಲಾದ ಮ್ಯಾಮೋಗ್ರಫಿ ಘಟಕವು ಕೈಗೆಟುಕುವ ದರದಲ್ಲಿ ಸ್ತನ ಕ್ಯಾನ್ಸರ್ ತಪಾಸಣೆಯ ಲಭ್ಯ ಇರಲಿದ್ದು, ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವ ಮೂಲಕ ಮರಣ ಪ್ರಮಾಣ ಕಡಿಮೆ ಮಾಡುವುದು ಮತ್ತು ಚಿಕಿತ್ಸಾ ಫಲಿತಾಂಶ ಉತ್ತಮಗೊಳಿಸುವುದಾಗಿದೆ. ಸಿ.ಎಸ್.ಐ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯು ಸದಾ ಸಮರ್ಪಿತ ಸೇವೆಯೊಂದಿಗೆ ಸಮುದಾಯಕ್ಕೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಬದ್ಧವಾಗಿದೆ. ಸ್ತನ ಕ್ಯಾನ್ಸರ್ ತಪಾಸಣೆ ಘಟಕದ ಉದ್ಘಾಟನೆಯೊಂದಿಗೆ, ಸ್ತನ ಕ್ಯಾನ್ಸರ್‌ನ ಅಪಾಯದ ಅಂಚಿನಲ್ಲಿರುವ ಮಹಿಳೆಯರಿಗೆ ತಲುಪುವ ನಮ್ಮ ಮಿಷನ್‌ಗೆ ಮತ್ತಷ್ಟು ಬಲ ನೀಡುತ್ತೇವೆ. ಸಾರ್ವಜನಿಕ ಆರೋಗ್ಯ ಮತ್ತು ತಡೆಗಟ್ಟುವ ಸೇವೆಗಳು ನಮ್ಮ ಬದ್ಧತೆಯೂ ಆಗಿದೆ. 1923ರಲ್ಲಿ ಮಿಷನ್ ಆಸ್ಪತ್ರೆಯಾಗಿ ಸ್ಥಾಪಿತವಾದ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ, ಸಮುದಾಯದಲ್ಲಿ ಬೆಳೆಯುತ್ತಿರುವ ಆರೋಗ್ಯದ ಅವಶ್ಯಕತೆಗಳನ್ನು ಪೂರೈಸಲು ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ. ಸ್ತನ ಕ್ಯಾನ್ಸರ್ ತಪಾಸಣಾ ಘಟಕದ ಆರಂಭವು ಸಮುದಾಯದ ಜನರ ಆರೋಗ್ಯದ ಅವಶ್ಯಕತೆಗಳಿಗೆ ತಕ್ಕಂತೆ, ಸಾರ್ವಜನಿಕ ಹಿತಾಸಕ್ತಿಯೊಂದಿಗೆ, ಗುಣಮಟ್ಟದ ಆರೈಕೆ ನೀಡುವತ್ತ ಮತ್ತೊಂದು ಹೆಜ್ಜೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಪಿಆರ್ ಒ ರೋಹಿ ರತ್ನಾಕರ್, ಆಪರೇಶನ್ ಮ್ಯಾನೇಜರ್ ಕಾವ್ಯಶ್ರೀ ಶೆಟ್ಟಿ ಇದ್ದರು.